ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೃಹಲಕ್ಷ್ಮಿ’ ಯೋಜನೆಯ ಮರು ಪರಿಶೀಲನೆಗೆ ಗ್ಯಾರಂಟಿ ಸಮಿತಿಗಳ ಸದಸ್ಯರು ಫಲಾನುಭವಿಗಳ ಮನೆಗೆ ಬಂದಾಗ ಅವರು ಕೇಳುವ ದಾಖಲೆಗಳನ್ನು ಒದಗಿಸಿ ಯೋಜನೆ ಕೈತಪ್ಪದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೃಹಲಕ್ಷ್ಮಿ’ ಯೋಜನೆಯ ಮರು ಪರಿಶೀಲನೆಗೆ ಗ್ಯಾರಂಟಿ ಸಮಿತಿಗಳ ಸದಸ್ಯರು ಫಲಾನುಭವಿಗಳ ಮನೆಗೆ ಬಂದಾಗ ಅವರು ಕೇಳುವ ದಾಖಲೆಗಳನ್ನು ಒದಗಿಸಿ ಯೋಜನೆ ಕೈತಪ್ಪದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಫಲಾನುಭವಿಗಳಿಗೆ ಈ ಸಂದೇಶ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಮೂಲಕ ನಾಡಿನ ಮಹಿಳೆಯರಿಗೆ ಆರ್ಥಿಕ ಶಕ್ತಿಯಾಗಿ ಕಷ್ಟದಲ್ಲಿ ಬೆನ್ನೆಲುಬಾಗಿ ನಾವು ನಿಂತಿದ್ದೇವೆ. ಈ ಯೋಜನೆ ಯಶಸ್ವಿಯಾಗಿ ಮೂರು ವರ್ಷ ಪೂರೈಸಿದೆ. ರಾಜ್ಯದ 1 ಕೋಟಿ 22 ಲಕ್ಷ ಗೃಹಣಿಯರ ಬ್ಯಾಂಕ್ ಖಾತೆಗೆ ಮೂರು ವರ್ಷಗಳಿಂದ ಪ್ರತಿ ತಿಂಗಳು ತಲಾ 2000 ರು. ಗೃಹಲಕ್ಷ್ಮಿ ಯೋಜನೆ ಹಣ ಜಮೆ ಮಾಡಲಾಗುತ್ತಿದೆ. ನಾಡಿನ ಮಹಿಳೆಯರ ಆತ್ಮವಿಶ್ವಾಸ, ಸ್ವಾಭಿಮಾನವೇ ಆಗಿರುವ ಗೃಹಲಕ್ಷ್ಮಿ ಯೋಜನೆ ಪರಿಶೀಲನೆಗೆ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರಿಗೆ ಅಗತ್ಯ ಮಾಹಿತಿ ಒದಗಿಸಲು ಅವಕಾಶವಿದೆ. ಅವರು ಹೊಸ ಅರ್ಜಿ ಕೊಡುತ್ತಾರೆ. ಅದನ್ನು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿ ಕೊಡಿ. ಜೊತೆಗೆ ಫಲಾನುಭವಿಗಳ ಹೊಸ ಭಾವಚಿತ್ರ, ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ಕೆಲ ದಾಖಲೆ ಪಡೆಯುತ್ತಾರೆ. ಎಲ್ಲ ದಾಖಲೆಗಳನ್ನು ಒದಗಿಸಿ ಸರ್ಕಾರಕ್ಕೆ ಸಹಕರಿಸಿ, ಯೋಜನೆ ಕೈತಪ್ಪದಂತೆ ನೋಡಿಕೊಳ್ಳಿ, ಆರ್ಥಿಕ ಸ್ವಾತಂತ್ರ್ಯ ಸಂಭ್ರಮಿಸಿ ಎಂದು ಶಿವಕುಮಾರ್ ಕೋರಿದ್ದಾರೆ.‘ಗೃಹಲಕ್ಷ್ಮಿ’ಗೆ ಚಾಲನೆ ನೀಡಿದ್ದೆ ಎಂದು ಸ್ಮರಿಸಲು ಹೆಮ್ಮೆ; ಸಿದ್ದು:ಮೂರು ವರ್ಷಗಳ ಹಿಂದೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿದ್ದೆ ಎಂಬುದನ್ನು ಸ್ಮರಿಸಲು ನನಗೆ ಹೆಮ್ಮೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಯೋಜನೆಯ ಫಲಾನುಭವಿಗಳಿಗೆ ಶುಭಾಶಯ ಕೋರಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಸಂಕಲ್ಪ ಮಾಡಿದ್ದೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನಮ್ಮ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಮೂರು ವರ್ಷಗಳ ಹಿಂದೆ ಇದೇ ದಿನ ಜಾರಿಗೆ ತಂದು, ರಾಜ್ಯದ ಪ್ರತಿಯೊಬ್ಬ ಅರ್ಹ ಮಹಿಳೆಗೆ ಪ್ರತಿ ತಿಂಗಳು 2000 ರು. ನೀಡುವ ಭರವಸೆಯನ್ನು ಈಡೇರಿಸಿದೆವು ಎಂದಿದ್ದಾರೆ. ಇದರಿಂದ ಇಂದು ಲಕ್ಷಾಂತರ ಗೃಹಲಕ್ಷ್ಮಿಯರ ಬದುಕಿನಲ್ಲಿ ಈ ಯೋಜನೆ ಭರವಸೆಯ ಬೆಳಕಾಗಿದೆ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ, ಆರೋಗ್ಯ, ಹೀಗೆ ತಮ್ಮ ಕುಟುಂಬದ ಅಗತ್ಯಗಳಿಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಆರ್ಥಿಕ ಶಕ್ತಿಯನ್ನು ಈ ಯೋಜನೆ ಮಹಿಳೆಯರಿಗೆ ನೀಡಿದೆ. ಒಬ್ಬ ತಾಯಿಯ ಮುಖದಲ್ಲಿ ಮೂಡುವ ನೆಮ್ಮದಿ, ಒಬ್ಬ ಗೃಹಿಣಿಗೆ ಸಿಕ್ಕಿರುವ ಆರ್ಥಿಕ ಸ್ವಾತಂತ್ರ್ಯ, ಮಕ್ಕಳ ಭವಿಷ್ಯದ ಬಗ್ಗೆ ಒಂದು ಕುಟುಂಬದಲ್ಲಿ ಮೂಡುವ ವಿಶ್ವಾಸ ಇವೇ ಗೃಹಲಕ್ಷ್ಮಿಯ ನಿಜವಾದ ಯಶಸ್ಸು ಎಂದಿದ್ದಾರೆ.ಕೋಟ್ಯಂತರ ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ಮತ್ತು ಆತ್ಮವಿಶ್ವಾಸದ ದೀಪ ಬೆಳಗುತ್ತಿರುವುದನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ಗೃಹಲಕ್ಷ್ಮಿ ಕೇವಲ ಒಂದು ಯೋಜನೆಯಲ್ಲ. ಅದು ಮಹಿಳೆಯರ ಮೇಲಿನ ನಮ್ಮ ನಂಬಿಕೆ, ಗೌರವ ಮತ್ತು ಬದ್ಧತೆಯ ಪ್ರತೀಕ. ಭರವಸೆಗಳು ರಾಜಕಾರಣವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ನಿಜವಾದ ಜನಸೇವೆ ಎಂದು ಹೇಳಿದ್ದಾರೆ.ಗೃಹಲಕ್ಷ್ಮಿ @ 3: ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಪ್ರಸಿದ್ಧ ಸ್ಮಾರಕಗಳು!
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿಗೆ ಮೂರು ವರ್ಷಗಳ ಸಂಭ್ರಮ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಮಾರಕಗಳು ಗುಲಾಬಿ ಬಣ್ಣದಲ್ಲಿ ಕಂಗೊಳಿಸಿವೆ. ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ ಸಂಜೆ 6ರಿಂದ ರಾತ್ರಿ 10ರವರೆಗೆ ಗುಲಾಬಿ ಬಣ್ಣದ ದೀಪಾಲಂಕಾರದ ಬೆಳಕಿನಲ್ಲಿ ಕಂಗೊಳಿಸಿದವು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿದ್ಯುತ್ ದೀಪಾಲಂಕಾರ ಆಯೋಜಿಸಿತ್ತು.ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರು. ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ನೆರವಾಗಿದೆ. ಸರ್ಕಾರವು ಗೃಹಲಕ್ಷ್ಮೀ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ(ಪಿಂಕ್) ಬಣ್ಣದ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು.