ಪರಿಷ್ಕೃತ ವೇತನದ ಮೇಲೆ ಆರ್ಥಿಕ ಸೌಲಭ್ಯ ನೀಡಿ

| Published : Jan 31 2025, 12:49 AM IST

ಸಾರಾಂಶ

ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಜಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದ್ದು ಇದನ್ನು ಸರಿಪಡಿಸವಂತೆ ಆಗ್ರಹಿಸಿ ನಗರದಲ್ಲಿ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಮಿತಿಯಿಂದ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

೨೫ ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುದಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದ್ದು ಇದನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಮಿತಿಯಿಂದ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗಿರಿಜಮ್ಮ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ೧-೭-೨೦೨೨ ರಿಂದ ೩೧-೭-೨೦೨೪ರ ಅವಧಿಯಲ್ಲಿ ೨೫ ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ.

೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಕೊಡಬೇಕೆಂದು ಒತ್ತಾಯಿಸಿದರು. ಈ ನಮ್ಮ ಬೇಡಿಕೆ ಕುರಿತು ನಾವುಗಳು ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ೨೦ಸಾವಿರಕ್ಕೂ ಅಧಿಕ ನೌಕರರು ಸಮಾವೇಶಗೊಂಡು ಪ್ರತಿಭಟನೆ ನಡೆಸಿದಾಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ಮನವಿಯನ್ನು ಸ್ವೀಕರಿಸಿ ಅದಿವೇಶನದ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ಸಭೆ ಕರೆದಿಲ್ಲ, ಯಾವ ಮಾಹಿತಿಯನ್ನು ನೀಡಿಲ್ಲ. ಆದ್ದರಿಂದ ರಾಜ್ಯಾದ್ಯಂತ ಈ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಎ.ಶಿವಣ್ಣ, ಕೆ.ಎನ್.ಶಿವಸ್ವಾಮಿ, ತಾಲೂಕು ಸಂಚಾಲಕ ಎಚ್.ಮಹದೇವಯ್ಯ, ಪದಾಧಿಕಾರಿಗಳಾದ ವೀರಭದ್ರಸ್ವಾಮಿ, ಬಂಗಾರಗಿರಿನಾಯ್ಕ, ನಿಂಗರಾಜು, ಬಸವಯ್ಯ, ಲಿಂಗರಾಜು, ಸಿದ್ದಪ್ಪ, ಸೆಲ್ವಾ ಮೇರಿ, ರಾಜು, ಪ್ರಭುಸ್ವಾಮಿ, ವೆಂಕಟೇಶ್, ರಾಜೇಶ್ವರಿ, ವಸಂತ, ಎಸ್.ರೇವಮ್ಮ ಹಾಗೂ ಇತರರು ಭಾಗವಹಿಸಿದ್ದರು.