ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಪೋಷಕರು ಇಂಗ್ಲೀಷ್ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ, ನಮ್ಮ ಕನ್ನಡ ಶಾಲೆಯ ಮಕ್ಕಳು ಎಲ್ಲ ರಂಗಗಳಲ್ಲೂ ಮಂಚೋಣಿಯಲ್ಲಿದ್ದು, ಮಾತೃಭಾಷೆಯ ಶಿಕ್ಷಣ ಕಲಿಕೆಗೆ ಮೊದಲ ಆದ್ಯತೆ ನೀಡಿ ಎಂದು ಶಾಲಾ ನವೀಕರಣದ ದಾನಿ ಡಾ. ರಮೇಶ್ ಕರೆ ನೀಡಿದರು.ತಾಲೂಕಿನ ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ ವಿಕಸನಕ್ಕೆ ಎಲ್ಲ ಭಾಷೆಗಳನ್ನು ಕಲಿಯಲು ನಮ್ಮದು ಏನೂ ಅಡ್ಡಿಯಿಲ್ಲ, ಆದರೆ ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಕಕ್ಕಾಗಿ ಕನ್ನಡ ಶಾಲೆಗಳಲ್ಲೇ ಓದಿಸಿ, ಮಕ್ಕಳ ಮಾನಸಿಕ ಶಕ್ತಿ ದಿನ ನಿತ್ಯ ಮನೆಯಲ್ಲಿ ಮಾತನಾಡುವ ಕನ್ನಡದಿಂದ ಗ್ರಹಿಸಲು ಸಾಧ್ಯವಾಗುವುದು. ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆಯಷ್ಟು ಪರಿಣಾಮಕಾರಿಯಾದ ಭಾಷೆ ಮತ್ತೊಂದಿಲ್ಲ. ಮಕ್ಕಳ ಜ್ಞಾನ ಸಂಪಾದನೆಗೆ ಸುಲಭ ಮಾರ್ಗದಲ್ಲಿ ಕಲಿಸಬೇಕು. ಇಂಗ್ಲಿಷ್ ಭಾಷೆಯ ಪದಗಳು ಮಕ್ಕಳ ಜ್ಞಾನ ಗ್ರಹಿಕೆಗೆ ಕಷ್ಟ, ಕನ್ನಡ ಮಕ್ಕಳಿಗೆ ಬಹಳ ಇಷ್ಟ, ಅವರು ಬೆಳೆದಂತೆ ಜಗತ್ತನ್ನು ತಿಳಿಯುತ್ತಾ ಹೊಸ ಹೊಸ ಪದಗಳನ್ನು ಬಳಸುತ್ತಾ ಶಿಕ್ಷಣ ಪ್ರಾದಾನ್ಯತೆ ಪಡೆಯುತ್ತದೆ.ಆಗ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ಸುಲಭ ಸಾಧ್ಯ ಎಂದರು.ಸಿಆರ್‌ಸಿ ಅಶ್ವತ್ಥನಾರಾಯಣ ಮಾತನಾಡಿ, ಈ ಶಾಲೆಯ ಪ್ರೇಕ್ಷಾ ಎಂಬ ವಿದ್ಯಾರ್ಥಿನಿ ಗಣಿತ ವಿಷಯದಲ್ಲಿ 20ಕ್ಕೆ 20 ಮಾರ್ಕ್ಸ್ ಪಡೆದು ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ್ದು, ಈ ಶಾಲೆಗೆ ಕೀರ್ತಿ ತಂದಿದೆ. ಆದ್ದರಿಂದ ಕುರುಬರಹಳ್ಳಿ ಶಾಲೆ ಎಲ್ಲ ರಂಗದಲ್ಲೂ ಮುಂದಿದೆ. ಈ ಶಾಲೆಯಲ್ಲಿ ಉತ್ತಮ ಶಾಲಾ ಕೊಠಡಿಗಳಿದ್ದು, ಆಟದ ಮೈದಾನ, ಶೌಚಾಲಯ, ಅಕ್ಷರ ದಾಸೋಹ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯಗಳಿದ್ದು ಉತ್ತಮ ಶಿಕ್ಷಕರಿದ್ದು ಕಂಪ್ಯೂಟರ್ ಕಲಿಕೆಗೆ ಪೂರಕವಾದ ವಾತವರಣವಿದೆ. ಆದ್ದರಿಂದ ಪೋಷಕರು ಹೆಚ್ಚು ಈ ಶಾಲೆಗೆ ಮಕ್ಕಳನ್ನು ದಾಖಲಾಸಿ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್ ಮಾತನಾಡಿ, ಇಂಗ್ಲಿಷ್ ಶಾಲೆಗಳಿಗಿಂತ ನಮ್ಮ ಕನ್ನಡ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ, ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಉಚಿತ ಬಿಸಿಯೂಟ, ಪುಸ್ತಕ, ಶೂ, ಸಮವಸ್ತ್ರ, ಬ್ಯಾಗ್, ಹಾಲು ಮೊಟ್ಟೆ ನೀಡುತ್ತಿದ್ದು, ಅಲ್ಲದೆ ಮುಂದಿನ ದಿನಗಳಲ್ಲಿ ರಾಗಿ ಮಾಲ್ಟ್ ನೀಡಲಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗುಣಮಟ್ಟದ ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.ಶಾಲಾ ಮುಖ್ಯ ಶಿಕ್ಷಕ ಜೆ.ಸಿ .ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಆರ್‌ಪಿ ಚನ್ನಬಸಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಡಿ. ಆದರ್ಶ, ಉಪಾಧ್ಯಕ್ಷೆ ತ್ರಿವೇಣಿ, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಗೌರಮ್ಮ, ನಿರ್ದೇಶಕಿ ಲಕ್ಷ್ಮೀದೇವಮ್ಮ, ಹೇಮಲತಾ, ಸೌಭಾಗ್ಯಮ್ಮ, ಗ್ರಾಮದ ಹಿರಿಯ ಮುಖಂಡ ವರದರಾಜು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಾನಂದ, ಶಿಕ್ಷಕಿ ಸೌಭಾಗ್ಯಮ್ಮ, ಕೃಷ್ಣಮೂರ್ತಿ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀನರಸಮ್ಮ, ಸಹಾಯಕಿ ಮೀನಾಕ್ಷಿ ಮತ್ತು ಮಕ್ಕಳು ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.