ಉಡುಪಿ: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಎಲ್ಲ ಮೂಲ ಸೌಕರ್ಯಗಳ ಜೊತೆಗೆ ಅವರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಎಲ್ಲ ಮೂಲ ಸೌಕರ್ಯಗಳ ಜೊತೆಗೆ ಅವರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರವಾಸಿ ಬೋಟ್‌ಗಳಲ್ಲಿ ಲೈಫ್ ಜಾಕೆಟ್ ಕಡ್ಡಾಯಗೊಳಿಸಬೇಕು. ತಪ್ಪಿದರೆ ಬೋಟ್ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದ ಅವರು, ಪ್ರವಾಸಿಗರೆಲ್ಲರೂ ಲೈಫ್ ಜಾಕೆಟ್ ಧರಿಸಿದರೆ ಮಾತ್ರ ಬೋಟ್‌ಗಳನ್ನು ಚಲಾಯಿಸಬೇಕು. ಈ ಬಗ್ಗೆ ಕರಾವಳಿ ಕಾವಲು ಪಡೆಯವರು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದರು.ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ ಪ್ರದೇಶದಲ್ಲಿ ಪ್ರವಾಸಿಗರ ರಕ್ಷಣೆಯ ಉದೇಶಕ್ಕಾಗಿ ವಾಚ್ ಟವರ್ ನಿರ್ಮಾಣ, ಆ ಪ್ರದೇಶದ ಮಾಹಿತಿ ಫಲಕ, ಅಗತ್ಯ ಸೂಚನೆಗಳ ಫಲಕ, ಅಪಾಯದ ಎಚ್ಚರಿಕೆಯ ಫಲಕಗಳನ್ನು ಕೂಡಲೇ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಭಿವೃದ್ಧಿಗೆ ನೀಲ ನಕ್ಷೆ: ಮಲ್ಪೆ ಬೀಚ್ ಅಭಿವೃದ್ಧಿಗೆ ನಿರ್ಮಿತಿ ಕೇಂದ್ರದ ಮೂಲಕ ನೀಲ ನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ತಯರಿಸಲಾಗಿದ್ದು, ಮಲ್ಪೆ ಬೀಚ್, ಅದರ ಉತ್ತರ ಭಾಗದ ಜಮೀನನ್ನು ಸ್ವಾಧೀನಪಡಿಸಿಕೊಂಡು ವಲಯವಾರು ಅಭಿವೃದ್ಧಿಗೆ ಯೋಜಿಸಲಾಗಿದೆ ಹಾಗೂ ಸೈಂಟ್ ಮೇರೀಸ್ ದ್ವೀಪದಲ್ಲೂ ಅಭಿವೃದ್ಧಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಿ, ಅನುದಾನದ ಲಭ್ಯತೆಯನ್ನಾಧರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಟೆಂಡರ್ ಮೂಲಕ ನಿರ್ವಹಣೆ: ಉಡುಪಿ ತಾಲೂಕಿನ ಕದಿಕೆ ಗ್ರಾಮದ ಕಡಲ ತೀರದ ನಿರ್ವಹಣೆ, ಅಭಿವೃದ್ಧಿ, ಜಲ ಸಾಹಸ ಚಟುವಟಿಕೆಗಳಿಗೆ ಹಾಗೂ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಕರ ದೋಣಿ ಸೇವೆಗೆ ಟೆಂಡರ್ ಕರೆದು, ಹಂಚಿಕೆ ಮಾಡಲಾಗುವುದು. ಮಲ್ಪೆ ಬೀಚ್ ಹಾಗೂ ಸೀ ವಾಕ್ ಪ್ರದೇಶಗಳಲ್ಲಿ ಅಂಗಡಿಗಳನ್ನು, ಸ್ವಚ್ಛತೆ ಮತ್ತು ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು ಎಂದರು.ಜಿಲ್ಲೆಯ ಬೀಚ್‌ಗಳಲ್ಲಿ ಜಲ ಸಾಹಸ ಕ್ರೀಡೆಗಳಿಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಕಳೆದ ವರ್ಷ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಗೆ ಸೂಚಿಸಲಾಗಿತ್ತು. ಅವರ ವರದಿಯನ್ನು ತಕ್ಷಣ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು. ಸಮುದ್ರದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆಗೆ, ಪ್ರವಾಸಿಗರ ರಕ್ಷಣೆಗೆ ಅಗತ್ಯವಿರುವ ಜೆಟ್‌ಸೀ ಬೈಕ್‌ಗಳನ್ನು ಕೆ.ಆರ್.ಡಿ.ಎಲ್.ನಿಂದ ಟೆಂಡರ್ ಕರೆದು ಖರೀದಿಸುವಂತೆ ಸೂಚಿಸಿದರು.
ಖಾಸಗಿ ಸಹಭಾಗಿತ್ವ ಬೇಕು: ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಮಲ್ಪೆ ಬೀಚ್‌ನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಂಪ್ರದಾಯಿಕ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ತೊಂದರೆಯಾಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರದ ಕೋಡಿ ಕಡಲ ಕಿನಾರೆಯಲ್ಲಿರುವ ಸೀ ವಾಕ್‌ನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉದ್ಯಾನವನ ನಿರ್ಮಾಣ, ಸಮುದ್ರ ವೀಕ್ಷಣೆಗೆ ಕುಳಿತುಕೊಳ್ಳಲು ಬೆಂಚ್ ಸೇರಿದಂತೆ ಮತ್ತಿತರ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕಲ್ಪಿಸಬೇಕೆಂದರು.ಸಭೆಯಲ್ಲಿ ಜಿಪಂ ಸಿಇಓ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್, ಎಡಿಸಿ ಅಬೀದ್ ಗದ್ಯಾಳ್, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್. ಎಂ., ಟೂರಿಸಮ್ ಅಸೋಸಿಯೇಶನ್ ನ ಮನೋಹರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.