ಗೀತಾ ಅವರಿಗೆ ಒಂದು ಅವಕಾಶ ನೀಡಿ: ಸಾ.ರಾ.ಗೋವಿಂದ್‌

| Published : May 01 2024, 01:18 AM IST

ಸಾರಾಂಶ

ಶಿವಮೊಗ್ಗ ವಿನೋಬನಗರದಲ್ಲಿರುವ ಸಚಿವ ಮಧು ಬಂಗಾರಪ್ಪರ ನಿವಾಸದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರಿಗೆ ಒಂದು ಅವಕಾಶ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೀತಾ ಅವರು ಈ ನಾಡಿನ ಅಪರೂಪದ ರಾಜಕಾರಣಿ. ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಮಗಳು. ಅವರಿಗೊಂದು ಅವಕಾಶ ಕೊಡಬೇಕಾಗಿದೆ. ಹಾಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಹಾಗೂ ಹಲವು ನಟ, ನಟಿಯರು ಗೀತಾ ಅವರ ಪರವಾಗಿ ಮತ ಕೇಳಲು ಬಂದಿದ್ದೇವೆ ಎಂದು ತಿಳಿಸಿದರು.

ಬಂಗಾರಪ್ಪನವರು ನೇರ ನುಡಿಗೆ ಹೆಸರಾದವರು. ಅವರು ಕಾವೇರಿ ಹೋರಾಟದ ಸಂದರ್ಭದಲ್ಲಿ ತೆಗೆದುಕೊಂಡ ಸುಗ್ರೀವಾಜ್ಞೆ ಇತಿಹಾಸದಲ್ಲಿ ದಾಖಲಾಗಿದೆ. ನಾನು ಹಾಗೂ ಕನ್ನಡ ಸಂಘಟನೆ ಹೋರಾಟಗಾರನಾಗಿದ್ದೆ. ನಮ್ಮ ಹೋರಾಟಕ್ಕೆ ಸುಪ್ರೀಂ ಕೋರ್ಟ್‍ಗೂ ಸೆಡ್ಡು ಹೊಡೆದು ನಿಂತರು. ಅದೇ ಗುಣ ಸಚಿವ ಮಧು ಬಂಗಾರಪ್ಪನವರಿಗೂ ಬಂದಿದೆ. ಗೀತಾ ಅವರು ಗೆದ್ದರೆ ಅವರು ಕೂಡ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಸಿನಿಮಾ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ನಾವೆಲ್ಲಾ ವ್ಯಕ್ತಿಗಾಗಿ ಬಂದಿದ್ದೇವೆ. ಇದು ಪಕ್ಷಾತೀತವಾಗಿದೆ. ಇದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಇದರ ಹಿಂದೆ ಪ್ರೀತಿ, ಅಭಿಮಾನ ಇದೆ ಅಷ್ಟೇ ಎಂದು ಹೇಳಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್. ಸುರೇಶ್ ಮಾತನಾಡಿ, ನಾನು ಶಿವಮೊಗ್ಗದವನೇ. ಈ ತುಂಗೆ ನೀರನ್ನು ಕುಡಿದು ಬೆಳೆದು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಶಿವಮೊಗ್ಗದ ಜನರು ಹೃದಯ ಶ್ರೀಮಂತಿಕೆ ಉಳ್ಳವರು. ನಾವೆಲ್ಲಾ ನಮ್ಮ ಸಹೋದರಿ ಗೀತಾ ಅವರ ಪರವಾಗಿ ಮತ ಕೇಳಲು ಬಂದಿದ್ದೇವೆ. ಅವರ ಬಂಗಾರಪ್ಪನವರ ಗುಣಗಳು ಕೂಡ ಎರವಲಾಗಿ ಬಂದಿವೆ. ದಿಟ್ಟತನವಿದೆ. ಗೆದ್ದರೆ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆ ಕೂಡ ಇದೆ. ನಮ್ಮೊಂದಿಗೆ ಇಡೀ ಚಿತ್ರ ತಂಡವೇ ಇದೆ. ಹೊಸ ಅಭ್ಯರ್ಥಿಗೆ ಒಂದು ಅವಕಾಶ ಬೇಕು ಎಂದರು.

ಸುಬ್ಬಣ್ಣ ಮಾತನಾಡಿ, ಬಂಗಾರಪ್ಪನವರು ಚಿತ್ರರಂಗಕ್ಕೆ ಬೆನ್ನೆಲುಬಾಗಿ ನಿಂತವರು. ಅದೇ ಗುಣ ಮಧು ಹಾಗೂ ಅವರ ಸಹೋದರಿ ಗೀತಾರಲ್ಲೂ ಇದೆ. ಚುನಾವಣೆ ಎಂಬುದು ನಿಂತ ನೀರಾಗಬಾರದು. ಹಳೆಯ ನೀರು ಕೊಚ್ಚಿ ಹೋಗಬೇಕು. ಹೊಸ ನೀರು ಬರಬೇಕು. ಗೀತಾ ಗೆಲ್ಲಬೇಕು ಎಂದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಪಕ್ಷಾತೀತವಾಗಿ ಫಿಲಂ ಚೇಂಬರ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ನಟ, ನಟಿಯರು ಅತ್ಯಂತ ಪ್ರೀತಿಯಿಂದ ಗೀತಾ ಅಕ್ಕರನ್ನು ಗೆಲ್ಲಿಸಲು ನಮ್ಮಲ್ಲಿಗೆ ಬಂದಿದ್ದಾರೆ. ಅವರು ಎರಡು ದಿನಗಳ ಕಾಲ ಇಲ್ಲಿ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ಡಾಲಿ ಧನಂಜಯ್, ದುನಿಯಾ ವಿಜಯ್, ಅನುಶ್ರೀ, ಚಿಕ್ಕಣ್ಣ ಮೊದಲಾವರು ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸಕ್ಕೆ ನನ್ನ ಅಭಿಮಾನದ ಕೃತಜ್ಞತೆಗಳು. ಗೀತಕ್ಕ ಗೆಲ್ಲುತ್ತಾರೆ ಎಂಬ ಆತ್ಮ ವಿಶ್ವಾಸ ಪ್ರತಿದಿನ ಹೆಚ್ಚಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಗಣೇಶ್, ರಾಮಕೃಷ್ಣ, ಕುಮಾರ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮೊದಲಾದವರು ಇದ್ದರು.