ಸಾರಾಂಶ
ಹಾಲಿಗೆ ಬೆಂಕಿಯೆಂಬ ಸಂಸ್ಕಾರ ನೀಡಿದಾಗ ಕೆನೆಯಾಗಿ, ಮೊಸರಾಗಿ, ಬೆಣ್ಣಿಯಾಗಿ, ಕೊನೆಗೆ ದೇವರ ದೀಪಕ್ಕೆ ತುಪ್ಪವಾಗಿ, ಎಲ್ಲರ ಊಟಕ್ಕೆ ಬೇಕಾಗುವ ತುಪ್ಪವಾಗುವುದೋ ಅದೇ ರೀತಿಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮುವರು ಎಂದು ಮಂಜಮ್ಮ ಜೋಗತಿ ಹೇಳಿದರು.
ಗದಗ: ಹಾಲಿಗೆ ಬೆಂಕಿಯೆಂಬ ಸಂಸ್ಕಾರ ನೀಡಿದಾಗ ಕೆನೆಯಾಗಿ, ಮೊಸರಾಗಿ, ಬೆಣ್ಣಿಯಾಗಿ, ಕೊನೆಗೆ ದೇವರ ದೀಪಕ್ಕೆ ತುಪ್ಪವಾಗಿ, ಎಲ್ಲರ ಊಟಕ್ಕೆ ಬೇಕಾಗುವ ತುಪ್ಪವಾಗುವುದೋ ಅದೇ ರೀತಿಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮುವರು.
ಎಲ್ಲದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದದ್ದು ಹಾಗೂ ಮಕ್ಕಳು ವಿದ್ಯೆಯ ಜೊತೆಗೆ ಗುರುಗಳಿಗೆ, ತಂದೆ-ತಾಯಿಗಳಿಗೆ ಗೌರವ ನೀಡುವ ಸಂಸ್ಕಾರವನ್ನು ಕಲಿಯಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಡಾ. ಮಾತಾ ಮಂಜಮ್ಮ ಜೋಗತಿ ಹೇಳಿದರು.
ನಗರದ ಬಾಲ ವಿನಾಯಕ ವಿದ್ಯಾನಿಕೇತನದಲ್ಲಿ ನಡೆದ ೩೮ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಆಸೆ, ಅಭಿರುಚಿ, ಆಸಕ್ತಿಗೆ ತಕ್ಕಂತೆ ವಿದ್ಯೆಯನ್ನು ಕಲ್ಪಿಸಿಕೊಡಬೇಕು.
ದೂರದರ್ಶನ, ಮೊಬೈಲ್‌ನಿಂದಾಗಿ ಪರಸ್ಪರ ಬಾಂಧವ್ಯಗಳು ಕಳಚಿಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಪಾಲಕರು ಆಧುನಿಕ ಜೀವನಕ್ಕೆ ಒಳಗಾಗದೆ, ಮಕ್ಕಳ ಭವಿಷ್ಯದ ಮೇಲೆ ಒತ್ತಾಯದ ಶಿಕ್ಷಣವನ್ನು ಹೇರದೆ ಅವರ ಜೊತೆ ಸ್ನೇಹಿತರಾಗಿ, ಸಲಹೆಗಾರರಾಗಿ, ಒಳ್ಳೆಯ ಮಾರ್ಗದರ್ಶಕರಾದಾಗ ಮಾತ್ರ ಮಕ್ಕಳ ಉಜ್ವಲ್ ಭವಿಷ್ಯ ರೂಪಗೊಳ್ಳುವುದು ಎಂದರು.
ಈ ವೇಳೆ ಜೋಗತಿ ನೃತ್ಯ ಮತ್ತು ಮಾತಾ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ಕಥೆಯನ್ನು ಮಕ್ಕಳು ನಾಟಕದ ಮೂಲಕ ಪ್ರದರ್ಶಿಸಿದಾಗ ಮಂಜಮ್ಮ ಜೋಗತಿ ಅವರು ತುಂಬಾ ಭಾವುಕರಾಗಿ ಮಕ್ಕಳೊಂದಿಗೆ ಹೆಜ್ಜೆ ಹಾಕುವುದರ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು.
೨೦೨೨-೨೦೨೩ರ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಶಾಲೆಯ ಕ್ರೀಡಾ ವೀರಾಗ್ರಣಿ ವಿಜೇತರಿಗೆ, ಶೈಕ್ಷಣಿಕ ಸಾಧನೆ, ಶಿಸ್ತಿನ ತರಗತಿ ಸೇರಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.
ಶಾಲೆಯ ಕಾರ್ಯದರ್ಶಿ ಎಸ್.ರವಿ, ನಿರ್ದೇಶಕ ಆರ್. ವಿನಾಯಕ್, ಇ.ಎಲ್.ಸಿ ಮುಖ್ಯಸ್ಥ ಮಲ್ಲಿಕಾ ರವಿ, ಪ್ಲೇ ಹೋಮ್‌ನ ಮುಖ್ಯಸ್ಥೆ ಗಂಗಾ, ಆಡಳಿತ ಮಂಡಳಿ ಸದಸ್ಯ ಎಂ.ಆರ್. ಪಾಟಿಲ್, ಪ್ರಾ.ವಿ.ಎಂ. ಅಡ್ನೂರ್, ಉಪ ಪ್ರಾ.ಪಿ.ಜಿ. ಬ್ಯಾಳಿ ಸೇರಿದಂತೆ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.