ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಿ

| Published : Nov 15 2025, 01:45 AM IST

ಸಾರಾಂಶ

ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು. ಹೀಗಾಗಿ ಮಕ್ಕಳ ಎದುರು ಶಿಸ್ತಿನಿಂದ ಇರಬೇಕಾದ್ದದು ಪಾಲಕರ ಜವಾಬ್ದಾರಿಯಾಗಿದೆ. ಎಲ್ಲ ಮಕ್ಕಳನ್ನೂ ಒಂದೇ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ.

ಹುಬ್ಬಳ್ಳಿ:

ಮಕ್ಕಳು ಮನೆಯಲ್ಲಿನ ಪರಿಸರ ಅನುಕರಣೆ ಮಾಡುತ್ತಿದ್ದು ಪಾಲಕರು ಅವರಿಗೆ ಮನೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಿದರೆ ಶಾಲೆಯಲ್ಲಿ ಅದರ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಯನಾಳ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಾಯನಾಳದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಪೋಷಕ ಶಿಕ್ಷಕರ ಮಹಾಸಭೆ-2025 ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು. ಹೀಗಾಗಿ ಮಕ್ಕಳ ಎದುರು ಶಿಸ್ತಿನಿಂದ ಇರಬೇಕಾದ್ದದು ಪಾಲಕರ ಜವಾಬ್ದಾರಿಯಾಗಿದೆ. ಎಲ್ಲ ಮಕ್ಕಳನ್ನೂ ಒಂದೇ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ಕೆಲವರು ಪಠ್ಯದಲ್ಲಿ ಆಸಕ್ತಿ ಹೊಂದಿದ್ದರೆ, ಇನ್ನೂ ಕೆಲ ಮಕ್ಕಳು ಕ್ರೀಡೆ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ನಿಪುಣರಾಗಿರುತ್ತಾರೆ. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರುವುದು ಶಿಕ್ಷಕರ ಜವಾಬ್ದಾರಿ. ಅವರ ಆಸಕ್ತಿದಾಯಕ ಕ್ಷೇತ್ರ, ವಿಷಯ ಅರಿತು ಅದೇ ಕ್ಷೇತ್ರದಲ್ಲಿ ಅವರನ್ನು ಮುಂದುವರಿಯಲು ಬಿಡಿ ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ತಂದೆ- ತಾಯಿಗಳು ಏನೇ ಹೇಳಿದರೂ ಅದು ತಮ್ಮ ಒಳ್ಳೆಯದ್ದಕ್ಕೇ ಎಂಬುದು ಮಕ್ಕಳಿಗೆ ಅರಿವಿರಬೇಕು. ಪಾಲಕರ, ಶಿಕ್ಷಕರ ಮಾತನ್ನು ತರ್ಕ ಮಾಡದೇ ಒಪ್ಪಿಕೊಳುವವನೇ ನಿಜವಾದ ವಿದ್ಯಾರ್ಥಿ. ಅಂತೆಯೇ ಪಾಲಕರೂ ಕೂಡ ಮಕ್ಕಳ ಜತೆಗೆ ಸ್ನೇಹ, ಪ್ರೇಮದಿಂದ ವರ್ತಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಮಕ್ಕಳು ದೊಡ್ಡಾಟ ಪ್ರದರ್ಶಿಸಿದರು. ಇದೇ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಘಟಕದ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಶಾಲೆಗೆ ಅಡುಗೆ ಕೋಣೆ ನಿರ್ಮಿಸಿಕೊಟ್ಟ ಶಾಲೆಯ ನಿವೃತ್ತ ಶಿಕ್ಷಕಿ ಲಕ್ಷ್ಮೀ ಏಕಬೋಟೆ ಅವರನ್ನು ಸನ್ಮಾನಿಸಲಾಯಿತು.

ಅಂಗನವಾಡಿ ಮಕ್ಕಳಿಂದ ಕೇಕ್ ಕಟ್ ಮಾಡಿಸುವ ಮೂಲಕ ಜಿಲ್ಲಾಧಿಕಾರಿ ಮಾಜಿ ಪ್ರಧಾನಿ ಜವಾಹರಲಾಲ್‌

ನೆಹರು ಜನ್ಮದಿನ ಆಚರಿಸಿದರು. ಕಾರ್ಯಕ್ರಮದ ಬಳಿಕ ವಕೀಲರಾದ ನೂರಜಹಾನ್ ಕಿಲ್ಲೇದಾರ ಅವರು ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಹಾಗೂ ಪ್ರಾಚಾರ್ಯ ಎಫ್.ಬಿ. ಸೊರಟೂರ ಅವರು ಶಿಕ್ಷಣದಲ್ಲಿ ಭಾಗಿದಾರರ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಿದರು. ರಾಯನಾಳ ಗ್ರಾಪಂ ಅಧ್ಯಕ್ಷ ರುದ್ರಪ್ಪ ಮೇಟಿ, ಉಪಾಧ್ಯಕ್ಷೆ ಗಂಗಮ್ಮ ಮಾರಡಗಿ, ಕೆಡಿಪಿ ಸದಸ್ಯ ನಾಗರಾಜ ಹೆಗ್ಗಣ್ಣವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣ, ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ರಾಯನಾಳ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸಂಜೀವಕುಮಾರ ಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ಹಂಚಾಟೆ, ಪಿಡಿಒ ನಾಗರಾಜ ಹಾಗೂ ಎಸ್.ಎಸ್. ಬಂಗಾರಿಮಠ ಸೇರಿದಂತೆ ಹಲವರಿದ್ದರು.