ಹೊಸದುರ್ಗ ತಾಲೂಕಿನ ಮದಕರಿ ನಾಯಕನ ಜನ್ಮಸ್ಥಳ ಜಾನಕಲ್‌ ಗ್ರಾಮದ ನಾಯಕರಹಟ್ಟಿಯಲ್ಲಿ ನೂತನವಾಗಿ ನಿರ್ಮಿಸಿರುವ ಓಬಳ ನರಸಿಂಹ ಸ್ವಾಮಿ ನೂತನ ದೇವಾಲಯಕ್ಕೆ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಇಮ್ಮಡಿ ಮಾಚಿದೇವ ಸ್ವಾಮೀಜಿ ಕಳಸಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ದೇವಸ್ಥಾನಕ್ಕೆ ಗ್ರಾಮಗಳಲ್ಲಿ ಪ್ರಾಮುಖ್ಯತೆ ನೀಡಿದಂತೆ ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆಯೂ ಕಾಳಜಿ ವಹಿಸಿದಾಗ ಗ್ರಾಮಗಳು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮದಕರಿ ನಾಯಕನ ಜನ್ಮಸ್ಥಳ ಜಾನಕಲ್‌ ಗ್ರಾಮದ ನಾಯಕರ ಹಟ್ಟಿಯಲ್ಲಿ ನೂತನವಾಗಿ ನಿರ್ಮಿಸಿರುವ ಓಬಳ ನರಸಿಂಹ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಕಳಶಾರೋಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ದೇವಾಲಯಗಳಿಗೆ ಮಹತ್ವದ ಸ್ಥಾನವಿದ್ದು ದೈವವನ್ನು ನಂಬಿ ನಾವೆಲ್ಲರೂ ಬದುಕುತ್ತಿದ್ದೇವೆ. ದೇವಾಲಯಗಳ ಅಭಿವೃದ್ಧಿಯ ಜೊತೆಗೆ ಶಿಕ್ಷಣದಲ್ಲಿಯೂ ಕ್ರಾಂತಿ ಆಗಬೇಕೆಂಬುದೇ ನಮ್ಮ ಬಯಕೆ ಎಂದರು.

ಮದಕರಿ ನಾಯಕನಿಗೆ ಜನ್ಮ ನೀಡಿದ ಈ ಪುಣ್ಯ ಭೂಮಿ ಜಾನಕಲ್ಲಿನ ನಾಯಕರ ಹಟ್ಟಿ ಶೌರ್ಯ ಸಾಹಸಕ್ಕೆ ಹೆಸರಾದ ಗ್ರಾಮ. ಇಲ್ಲಿನ ವಾಲ್ಮೀಕಿ ನಾಯಕ ಬುಡಕಟ್ಟು ಜನರ ಆರಾಧ್ಯ ದೈವ ಓಬಳ ನರಸಿಂಹ ಸ್ವಾಮಿಯ ನೂತನ ದೇವಾಲಯ ಅತ್ಯಂತ ವಿನೂತನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಈ ಭಾಗದ ಜನರಿಗೆ ಶಾಂತಿ ನೆಮ್ಮದಿ ನೀಡಲಿ ನಾಡಿನಲ್ಲೆಡೆ ಮಳೆ ಬೆಳೆ ಚೆನ್ನಾಗಿ ಒಂದು ರೈತರು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಚಿದೇವ ಗುರು ಪೀಠದ ಇಮ್ಮಡಿ ಮಾಚಿದೇವ ಸ್ವಾಮೀಜಿ, ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ, ಬಿಜೆಪಿ ಮುಖಂಡ ಎಸ್ ಲಿಂಗಮೂರ್ತಿ ಸೇರಿದಂತೆ ಜಾನಕಲ್ ನಾಯಕರಹಟ್ಟಿಯ ಗುಡಿ ಗೌಡರು, ಸಮಾಜದ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ದೇವಾಲಯದಲ್ಲಿ ಕೊಲ್ಲಾಪುರದಮ್ಮ ದೇವಿ ಹಾಗೂ ಓಬಳ ನರಸಿಂಹ ಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ಪೂಜೆ ಹೋಮ ಹವನಗಳು, ನೂತನ ಗೋಪುರಕ್ಕೆ ಕಳಶಾರೋಹಣ ಕಾರ್ಯಕ್ರಮ ನೆರವೇರಿದವು.