ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹೊಸ ಕನಸು ಕಟ್ಟಿಕೊಂಡು ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಆರಂಭದ ಆಶಯ ಹೊಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.ಬಾದಾಮಿ ತಾಲೂಕಿನ ಕಟಗೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಯೋಜನೆಗಳನ್ನು ಬಿಡಿಸಿಟ್ಟರು. ರೈಲ್ವೆ ಯೋಜನೆಗಳ ಅನುಷ್ಠಾನ, ಕಳಸಾ ಬಂಡೂರಿ ನೀರಾವರಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ, ಜವಳಿ ಪಾರ್ಕ್ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆಯ ಕನಸು ನನ್ನದು. ನಾಲ್ಕು ಅವಧಿಗೆ ಬಿಜೆಪಿಗೆ ಅವಕಾಶ ಕೊಟ್ಟಿದ್ದೀರಿ. ನನಗೆ ಒಂದು ಅವಕಾಶ ಕೊಟ್ಟು ನೋಡಿ. ನಿಮ್ಮ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಕೆಲ ಬಿಜೆಪಿ ನಾಯಕರು ಮನಮೋಹನ್ ಸಿಂಗ್ ಮೌನದ ಬಗ್ಗೆ ಟೀಕೆ ಮಾಡುತ್ತಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಾತನಾಡಲು ಹೋಗಲಿಲ್ಲ. ಕೆಲಸ ಮಾಡಿ ತೋರಿಸಿದರು. ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದು ಎಂದು ಹೇಳಿದರು.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಗ್ಗೆ ಲಘುವಾಗಿ ಮಾತನಾಡಿದ್ದನ್ನು ರಾಜ್ಯದ ರೈತರು ಯಾವುದೇ ಕಾರಣಕ್ಕೂ ಮರೆಯಬಾರದು. ರಾಜ್ಯದಿಂದಲೇ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಕರ್ನಾಟಕದ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬರಕ್ಕೆ ತುತ್ತಾಗಿರುವ ರೈತರ ನೆರವಿಗೆ ಧಾವಿಸಬೇಕಾದ ವಿತ್ತ ಮಂತ್ರಿ, ಗ್ಯಾರಂಟಿ ಯೋಜನೆ ಜಾರಿ ಮಾಡಿ ಬೊಕ್ಕಸ ಬರಿದು ಮಾಡಿಕೊಂಡು ದಿವಾಳಿಯಾಗಿ ನಮ್ಮ ಬಳಿ ಕೇಳುತ್ತಿದ್ದೀರಿ ಎಂದು ಲಘುವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರವೇ ರಚನೆಯಾದರೆ ಜನಸಾಮಾನ್ಯರ ಬದುಕು ಬೀದಿಗೆ ಬರುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.ಬಿಜೆಪಿ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ದೇಶಕ್ಕೆ ನೀಡಿದ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಂಡು ಮತ ಚಲಾಯಿಸಿ. ಯಾವುದೇ ವ್ಯಕ್ತಿ ಅಥವಾ ನಾಯಕತ್ವದ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ. ಆದರೆ, ಅಧಿಕಾರದಲ್ಲಿದ್ದಾಗ ಮಾಡಿದ್ದೇನು ಎಂಬುದನ್ನು ಕೇಳಬೇಕಾಗುತ್ತದೆ ಎಂದು ಪ್ರಶ್ನಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಅವರು ಚುನಾವಣಾ ಬಾಂಡ್ ಅಕ್ರಮ ವಿಶ್ವದಲ್ಲೇ ಅತಿ ದೊಡ್ಡ ಹಗರಣ ಎಂದು ದೂರಿದ್ದಾರೆ. ಬಿಜೆಪಿಯಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಸುಬ್ರಹ್ಮಣ್ಯಂ ಸ್ವಾಮಿ ಕೂಡ ಕೇಂದ್ರ ನಾಯಕತ್ವದ ಬಗ್ಗೆ ಕಿಡಿ ಕಾರಿದ್ದಾರೆ. ಸ್ವಪಕ್ಷಿಯರೇ ಟೀಕೆ ಮಾಡುತ್ತಿರುವಾಗ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜು ಬರಗುಂಡಿ. ಟಿ.ಎಸ್. ಮೊಕಾಶಿ, ದಾನಮ್ಮ ಪಾಟೀಲ, ಬಿ.ಬಿ.ಸೂಳಿಕೇರಿ, ರಾಜು ಜವಳಿ, ಬಿ.ಎಸ್.ಹದ್ಲಿ, ಪಿ.ಕೆ.ಪಾಟೀಲ, ಶ್ರೀಕಾಂತ್ ಗುಡ್ಡದ, ಮಹೇಶ್ ತಾಳಂಪಲ್ಲಿ ಮತ್ತಿತರ ಮುಖಂಡರು ಭಾಗವಹಿಸಿದ್ದರು.
------------ಕೋಟ್
ರಾಜ್ಯದಲ್ಲಿ ಘೋಷಣೆ ಮಾಡಿದಂತೆ ಕೇಂದ್ರದಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ಈ ಗ್ಯಾರಂಟಿಗಳೂ ಅನುಷ್ಠಾನಕ್ಕೆ ಬರಲಿವೆ. ಒಂದು ವೇಳೆ ಕೊಟ್ಟ ಮಾತು ತಪ್ಪಿದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ನಿಮಗೆ ಅವಕಾಶವಿದೆ.- ಭೀಮಸೇನ ಚಿಮ್ಮನಕಟ್ಟಿ, ಶಾಸಕ