ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನದು. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ, ನಿಮ್ಮ ಋಣ ತೀರಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮತದಾರರಲ್ಲಿ ಕೈ ಮುಗಿದು ಮನವಿ ಮಾಡಿದರು.ಪಟ್ಟಣದಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಬೃಹತ್ ರೋಡ್ ಶೋ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಅವರು, ನಿಮ್ಮ ಸಹೋದರಿಯಾಗಿ ನಿಮ್ಮ ಮಗಳಾಗಿ ಕೇಳುತ್ತಿದ್ದೇನೆ, ನನಗೆ ಒಂದು ಅವಕಾಶ ಮಾಡಿಕೊಡಬೇಕು. ಅವಕಾಶ ಮಾಡಿ ಕೊಟ್ಟರೆ ನಿರಂತರವಾಗಿ ನಿಮ್ಮ ಸೇವೆ ಮಾಡಿ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.ಅಬಕಾರಿ ಸಚಿವ ಆರ್.ಬಿ.ತಿಮ್ಮಪೂರ ಸಂಯುಕ್ತಾ ಪಾಟೀಲ ಪರ ಮತಯಾಚಿಸಿ ಮಾತನಾಡಿ, ಜಿಲ್ಲೆಯಲ್ಲಿ ಲೋಕಾಪುರ ಪಟ್ಟಣ ಅಭಿವೃದ್ಧಿ ಕಾಣಬೇಕಿದೆ. ಇಲ್ಲಿಯವರೆಗೆ ೨೦ ವರ್ಷ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಯಾವುದೇ ಕೆಲಸ ಮಾಡಿಲ್ಲ. ಸಹೋದರಿ ಸಂಯುಕ್ತಾ ಪಾಟೀಲರಿಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ರೈತರ ಕೃಷಿ ಸಾಲ ಮನ್ನಾ ಮಾಡಲಾಗುವುದು. ಕೊರೋನಾ ಸಂದರ್ಭದಲ್ಲಿ ಜನ ಆಸ್ಪತ್ರೆ ಬಿಲ್ ಪಾವತಿಗೆ ಆಸ್ತಿ ಮಾರಾಟ ಮಾಡಿದ, ಅಧಿಕ ಬಡ್ಡಿಗೆ ಸಾಲ ಪಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ₹ 25 ಲಕ್ಷವರೆಗೆ ಆರೋಗ್ಯವಿಮೆ ನೀಡಲು ನಿರ್ಧರಿಸಿದೆ. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೇಂದ್ರ ಸರ್ಕಾರವೇ ಆಸ್ಪತ್ರೆ ವೆಚ್ಚ ಭರಿಸಲಿದೆ ಎಂದು ಹೇಳಿದರು.---
ಭರ್ಜರಿ ರೋಡ್ ಶೋಮೇನ್ ಬಜಾರ್, ಜ್ಞಾನಾನಂದ ಮಠ ರಸ್ತೆ, ಲೋಕಾಪುರ ರಸ್ತೆ ಮಾರ್ಗವಾಗಿ ರೋಡ್ ಶೋ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ಹಲವು ಮುಖಂಡರು ಇದ್ದರು. ಮಾರ್ಗದುದ್ದಕ್ಕೂ ಕಾರ್ಯಕರ್ತರು ವಾಹನದ ಮೇಲೆ ಪುಷ್ಪವೃಷ್ಟಿ ಮಾಡಿದರು.
ಪಕ್ಷ ಸೇರ್ಪಡೆ: ಪಟ್ಟಣದ ರಾಮಣ್ಣ ಮಾಳಿ, ಬಿ.ಸಿ.ಮಾಳಿ ಹಾಗೂ ಅಯ್ಯಪ್ಪಗೌಡ ಪಾಟೀಲ ಹಾಗೂ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ರ‍್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡ ಶಿವಾನಂದ ಉದುಪುಡಿ, ಉದಯ ಸಾರವಾಡ, ಅಶೋಕ ಕಿವಡಿ, ಲಕ್ಷ್ಮಣ ತಳೇವಾಡ, ಸದುಗೌಡ ಪಾಟೀಲ, ಸಂಜಯ ತಳೇವಾಡ, ವಿನಯ ತಿಮ್ಮಾಪೂರ, ಗುರುರಾಜ ಉದುಪುಡಿ, ಪವನ ಉದುಪುಡಿ, ರಫೀಕ ಬೈರಕದಾರ, ಲೋಕಣ್ಣ ಕೊಪ್ಪದ, ಭೀಮನಗೌಡ ಪಾಟೀಲ, ಆನಂದ ಹಿರೇಮಠ, ಲಕ್ಷ್ಮಣ ಮಾಲಗಿ, ಕೃಷ್ಣಾ ಹೂಗಾರ, ಸದಾಶಿವ ಉದುಪುಡಿ, ಮಹಾನಿಂಗಪ್ಪ ಹುಂಡೇಕಾರ, ಮಹೇಶ ಮಳಲಿ, ಮಹೇಶ ಪೂಜಾರ, ಲೋಕಣ್ಣ ಉಳ್ಳಾಗಡ್ಡಿ, ರೆಹಮಾನ್ ತೊರಗಲ್ಲ, ಕುಮಾರ ಕಾಳಮ್ಮನವರ, ಕೃಷ್ಣಾ ಜಟ್ಟೆನ್ನವರ, ಸುಲ್ತಾನ್ ಮುಜಾವರ, ಶಾಂತೇಶ ಬೋಳಿಶೆಟ್ಟಿ, ಲೋಕಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.