ಸಾರಾಂಶ
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸಿದ ಕಬ್ಬಾಳು ಗ್ರಾಪಂ ಪಿಡಿಒ ವಿರುದ್ಧ ಕಂಚನಹಳ್ಳಿ ಗ್ರಾಮಸ್ಥರು ಕನಕಪುರದ ತಾಪಂ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕನಕಪುರ
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸಿದ ಕಬ್ಬಾಳು ಗ್ರಾಪಂ ಪಿಡಿಒ ವಿರುದ್ಧ ಕಂಚನಹಳ್ಳಿ ಗ್ರಾಮಸ್ಥರು ನಗರದ ತಾಪಂ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಗ್ರಾಪಂಗೆ ನಮೂನೆ 6ರಲ್ಲಿ ಅರ್ಜಿ ಕೊಟ್ಟಿರುವ ಕೂಲಿಕಾರ ಕುಟುಂಬಗಳಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು. 600 ರು. ಕೂಲಿ ಜೊತೆಗೆ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು ಎಂದರು.ಕೃಷಿ ಕೂಲಿಕಾರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಿ.ಹನುಮೇಶ್ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಕುಡಿಯುಲು ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಂತಹ ಮೂಲಭೂತ ಸೌಕರ್ಯ ನೀಡಬೇಕು. ಜೊತೆಗೆ ಕಾಯಕ ಬಂಧುವಿಗೆ ಗುರುತಿನ ಚೀಟಿ ಪ್ರೋತ್ಸಾಹಧನವನ್ನು ಅವರ ಖಾತೆಗೆ ಜಮಾ ಮಾಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರ ಬಳಕೆ ಮಾಡಬಾರದು ಎಂದು ಆಗ್ರಹಿಸಿದರು.
ತಾಪಂ ಇಒ ಭೈರಪ್ಪ ಮಾತನಾಡಿ, ಶೀಘ್ರವೇ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ನರೇಗಾ ಕೂಲಿ ಕಾರ್ಮಿಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದರು.ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯರಾದ ರಾಮಯ್ಯ, ಲಕ್ಷ್ಮಿ ಕುಂತೂರು, ಗ್ರಾಮ ಘಟಕದ ಅಧ್ಯಕ್ಷೆ ಕಂಚನಹಳ್ಳಿ ರಕ್ಷ್ಮಮ್ಮ,ಉಪಾಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ಮಂಚೇಗೌಡ, ಮುಖಂಡರುಗಳಾದ ಮಂಗಳಮ್ಮ, ನೀಲಮ್ಮ ಇದ್ದರು.