ನೇಹಾ ಹಿರೇಮಠ ಹತ್ಯೆಗೆ ನ್ಯಾಯ ಕೊಡಿ

| Published : Apr 23 2024, 12:50 AM IST

ಸಾರಾಂಶ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

- ಕಾಂಗ್ರೆಸ್‌ ತುಷ್ಟೀಕರಣ ನೀತಿ ಖಂಡಿಸಿ ಪ್ರತಿಭಟನೆಯಲ್ಲಿ ಬಿಜೆಪಿ ಆಗ್ರಹ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್.ಶಿವಯೋಗಿಸ್ವಾಮಿ, ಮಾಡಾಳ್ ಮಲ್ಲಿಕಾರ್ಜುನ, ಯಶವಂತರಾವ್‌ ಇತರರ ನೇತೃತ್ವದಲ್ಲಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಹಂತಕನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಎಸಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಮುಖಂಡರು ಮಾತನಾಡಿ, ನೇಹಾ ಹಿರೇಮಠಗೆ 9 ಸಲ ಚುಚ್ಚಿ ಅಮಾನುಷವಾಗಿ ಹತ್ಯೆಗೈದ ದುಷ್ಕರ್ಮಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಎಚ್ಚರಿಕೆ ಪಾಠ ರವಾನಿಸುವ ಕೆಲಸ ಆಗಬೇಕು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅದೊಂದು ವೈಯಕ್ತಿಕ ಕಾರಣದ ಹತ್ಯೆಯೆಂಬುದಾಗಿ ಹೊಣೆಗೇಡಿತನ ಪ್ರದರ್ಶಿಸಿದ್ದು ನಾಡಿನ ದುರಂತ. ಇನ್ನಾದರೂ ಸರ್ಕಾರ ತುಷ್ಟೀಕರಣ ನೀತಿ ಕೈಬಿಟ್ಟು, ಮೃತ ನೇಹಾ ಆತ್ಮಕ್ಕೆ ಶಾಂತಿ ಕೊಡಿಸುವ, ಮೃತಳ ಹೆತ್ತವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ ಎಂದರು.

ಹಂತಕನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ತಕ್ಷಣವೇ ನೇಹಾ ಹತ್ಯೆ ಪ್ರಕರಣದ ಉನ್ನತ ಮಟ್ಟದ ತನಿಖೆ ಮಾಡಿ, ನೊಂದ ಹೆತ್ತವರು, ಕುಟುಂಬ ವರ್ಗಕ್ಕೆ ನ್ಯಾಯ ಕೊಡಿಸಲಿ. ಲವ್ ಜಿಹಾದ್ ಹೆಸರಿನಲ್ಲಿ ನೇಹಾ ಹತ್ಯೆ ಮಾಡಲಾಗಿದೆ. ಬಿಜೆಪಿಯಷ್ಟೇ ಅಲ್ಲ, ವಿದ್ಯಾರ್ಥಿ, ಯುವಜನರು, ಸಾರ್ವಜನಿಕರು ರಾಜ್ಯವ್ಯಾಪಿ ಹೋರಾಟ ನಡೆಸಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ದೇವರಮನಿ ಶಿವಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್.ಜಗದೀಶ, ರಾಜಶೇಖರ ನಾಗಪ್ಪ, ಪಿ.ಸಿ.ಶ್ರೀನಿವಾಸ ಭಟ್, ರಾಜನಹಳ್ಳಿ ಶಿವಕುಮಾರ, ಜಿ.ಎಸ್.ಶ್ಯಾಮ ಮಾಯಕೊಂಡ, ಧನಂಜಯ ಕಡ್ಲೇಬಾಳ್, ಅನಿಲಕುಮಾರ ನಾಯ್ಕ, ಅಣ್ಣೇಶ ಐರಣಿ, ಎಚ್.ಪಿ.ವಿಶ್ವಾಸ್‌, ರಮೇಶ ನಾಯ್ಕ, ಕೆ.ಪ್ರಸನ್ನಕುಮಾರ, ಶಂಕರಗೌಡ ಬಿರಾದಾರ ಇತರರು ಪ್ರತಿಭಟನೆಯಲ್ಲಿದ್ದರು. ಮುಖಂಡರು, ಕಾರ್ಯಕರ್ತರು, ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -(ಫೋಟೋ ಬರಲಿವೆ):