ಸಾರಾಂಶ
ಕುಕನೂರು: ರೈತರು ಹೊಸ ಕೆರೆ ನಿರ್ಮಾಣಕ್ಕೆ ಹದಿನೈದು ದಿನದಲ್ಲಿ ಒಪ್ಪಿಗೆ ಪತ್ರ ನೀಡಿ, ಕೆರೆ ನಿರ್ಮಾಣದ ಅವಕಾಶ ಕ್ಷೇತ್ರಕ್ಕೆ ಒದಗಿ ಬಂದಿದೆ. ಇದು ಸದ್ಬಳಕೆ ಆಗಬೇಕಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಮಂಗಳೂರು, ಶಿರೂರು, ಬಳಗೇರಿ ಹಾಗೂ ನಾನಾ ಗ್ರಾಮದಲ್ಲಿ ಕೃಷ್ಣ ಜಲ ಭಾಗ್ಯ ನಿಯಮಿತದಿಂದ ₹970 ಕೋಟಿ ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಲಭ್ಯತೆ ಬಗ್ಗೆ ಜರುಗಿದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು. ಕೆರೆ ನಿರ್ಮಿಸಿ ಕೆರೆ ತುಂಬಿಸುವ ಯೋಜನೆ ಕ್ಷೇತ್ರಕ್ಕೆ ಒದಗಿ ಬಂದಿರುವುದು ಪುಣ್ಯದ ಫಲ. ರಾಜ್ಯದಲ್ಲಿ ಎಲ್ಲಿಯೂ ಇಷ್ಟು ದೊಡ್ಡ ಯೋಜನೆ ಈ ಸಲ ಅನುಮೋದನೆ ಆಗಿಲ್ಲ. ಈಗ ಕ್ಷೇತ್ರಕ್ಕೆ ಬಂದಿದೆ. ಕಾರಣ ಒದಗಿ ಬಂದಿರುವ ಈ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು. ಇದು ಒಮ್ಮೆ ಒದಗಿ ಬಂದಿರುವ ಅವಕಾಶ ಆಗಿದೆ. ಆದ ಕಾರಣ ರೈತರು ಸರ್ಕಾರಿ ಬೆಲೆಯಲ್ಲಿ ಒಂದೇ ಕಡೆ ಗ್ರಾಮವೊಂದಕ್ಕೆ 50 ಎಕರೆ ಭೂಮಿ ನೀಡಬೇಕು. ದೊಡ್ಡ ಕೆರೆ ನಿರ್ಮಾಣ ಮಾಡಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ. ಭೌಗೋಳಿಕವಾಗಿ ಕ್ಷೇತ್ರಕ್ಕೆ ಯಾವುದೇ ಹಳ್ಳಗಳು ಹರಿದು ಬರುವುದಿಲ್ಲ. ಆದ್ದರಿಂದ ನಾರಾಯಣಪುರ ಡ್ಯಾಂನಿಂದ ನೀರು ತಂದು ಕೆರೆ ತುಂಬಿಸಲಾಗುವುದು ಎಂದು ಹೇಳಿದರು.ನೀರಾವರಿಗೆ ಪ್ರಧಾನಿ ಮಂತ್ರಿ ಕರೆದು ಸಭೆ ಮಾಡಬೇಕು. ಆದರೆ ಪ್ರಧಾನಿ ಅವರು ಆ ಕೆಲಸ ಮಾಡುತ್ತಿಲ್ಲ. ನೀರಾವರಿ ಆಗಬೇಕಾದರೆ ಕೃಷ್ಣ ಬೀ ಸ್ಕೀಂ ಬಗ್ಗೆ ಕೋರ್ಟಿನಲ್ಲಿ ಅನ್ಯ ರಾಜ್ಯ, ನಮ್ಮ ರಾಜ್ಯದ ಮಧ್ಯೆ ಕೇಸ್ ಇದೆ. ಅ ದನ್ನು ಪ್ರಧಾನಿ ಅವರು ಸಭೆ ಕರೆದು ಬಗೆಹರಿಸಬೇಕು. ಹಾಗಾಗಿ ನೀರಾವರಿಗಾಗಿ ನೀರು ತರಲು ಆಗದು. ಅದರ ಬದಲಾಗಿ ಕುಡಿಯಲು, ಜಾನುವಾರುಗಳಿಗೆ ನೀರಿಗಾಗಿ ಕೆರೆ ತುಂಬಿಸಿಕೊಳ್ಳಬಹುದು. ನಮ್ಮಲ್ಲಿ ಹೆಚ್ಚು ದೊಡ್ಡ ಪ್ರಮಾಣದ ಕೆರೆಗಳು ಇಲ್ಲದ ಕಾರಣ ನೂತವಾಗಿಯೇ ಕೆರೆ ನಿರ್ಮಿಸಿ ಕೆರೆಗೆ ನೀರು ತುಂಬಿಸಿಕೊಳ್ಳುವ ಯೋಜನೆ ಮಾಡಬೇಕಿದೆ. ನಾರಾಯಣಪುರದಿಂದ ನೂತನವಾಗಿ ಹೊಸ ಪೈಪ್‌ಲೈನ್ ಸಹ ಆಗುತ್ತದೆ ಎಂದರು.
ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಜನರು ಬೆಂಬಲ ನೀಡಬೇಕು. ಸರ್ಕಾರದ ಬೆಲೆ ಪ್ರಕಾರ ನಾವು ರೈತರಿಂದ ಜಮೀನು ಖರೀದಿ ಮಾಡುತ್ತೇವೆ. ಕೆರೆಗಳ ನಿರ್ಮಾಣದಿಂದ ಅಂತರ್ಜಲ ವೃದ್ಧಿ ಆಗುತ್ತದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಸಂಪೂರ್ಣವಾಗಿ ನೀಗುತ್ತದೆ ಎಂದರು.ಕೆಬಿಜೆಎನ್‌ಎಲ್ ಅಭಿಯಂತರ ಮಂಜುನಾಥ ಮಾತನಾಡಿದರು. ತಹಸೀಲ್ದಾರ್ ಎಚ್. ಪ್ರಾಣೇಶ, ಇಒ ಸಂತೋಷ ಬಿರಾದಾರ ಹಾಗೂ ಮುಖಂಡರಿದ್ದರು.