ಉತ್ತರ ಕರ್ನಾಟಕದಲ್ಲಿ ಕೃಷಿಯೇ ಮೂಲ ಉದ್ಯೋಗವಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿಯಾಗಬೇಕಾದರೆ ಜಮೀನುಗಳಿಗೆ ಸರಿಯಾದ ರಸ್ತೆ ಇರಬೇಕು. ಇಲ್ಲಿ ಸರಿಯಾದ ಬೆಳೆ ಬೆಳೆದರೂ ಮನೆಗಳಿಗೆ ರೈತರ ಬೆಳೆ ತಲುಪುತ್ತಿಲ್ಲ.
ಹುಬ್ಬಳ್ಳಿ:
ಧಾರವಾಡ ಜಿಲ್ಲೆಯಲ್ಲಿ ಅತಿವೃ಼ಷ್ಟಿಯಿಂದಾಗಿ ರೈತರ ಬೆಳೆ ಹಾಗೂ ಹೊಲದ ರಸ್ತೆಗಳು ಹಾಳಾಗಿದೆ. ರಸ್ತೆ ದುರಸ್ತಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಬಂದ್ ಆಗಿದ್ದು ಕೂಡಲೇ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಿ ರೈತರಿಗೆ ನೆರವಾಗಬೇಕೆಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.ಅಧಿವೇಶನದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಕೃಷಿಯೇ ಮೂಲ ಉದ್ಯೋಗವಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿಯಾಗಬೇಕಾದರೆ ಜಮೀನುಗಳಿಗೆ ಸರಿಯಾದ ರಸ್ತೆ ಇರಬೇಕು. ಇಲ್ಲಿ ಸರಿಯಾದ ಬೆಳೆ ಬೆಳೆದರೂ ಮನೆಗಳಿಗೆ ರೈತರ ಬೆಳೆ ತಲುಪುತ್ತಿಲ್ಲ ಎಂದರು.
ರೈತರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಜತೆಗೆ ಸಂಪೂರ್ಣ ಬೆಳೆ ಖರೀದಿಸಬೇಕು ಎಂದು ಆಗ್ರಹಿಸಿದ ಅವರು, ಬೆಣ್ಣಿಹಳ್ಳದಿಂದ ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗುತ್ತದೆ. ನೀರು ಸುಖಾಸುಮ್ಮನೆ ಹರಿದು ಹೋಗುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಲು ಶಾಶ್ವತ ಉಪಾಯ ಕಂಡುಕೊಳ್ಳಬೇಕು. ಯುವಕರು ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುತ್ತಿದ್ದು ಕೈಗಾರಿಕೆ ತೆರದು ಯುವಕರಿಗೆ ಅನುಕೂಲ ಮಾಡಿಕೊಡಬೇಕು. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಯಾವುದೇ ನೇಮಕಾತಿ ನಡೆಯುತ್ತಿಲ್ಲ. ಉದ್ಯೋಗ ಸೃಷ್ಟಿ ಮಾಡಬೇಕು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಆಗಬೇಕು. ₹ 5000 ಕೋಟಿ ಅನುದಾನ ನೀಡಬೇಕೆಂದು ಒತ್ತಾಯಿಸಿದರು.