ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲೂ ವಿಜ್ಞಾನ ಅಡಕವಾಗಿರುವುದರಿಂದ ವಿದ್ಯಾರ್ಥಿಗಳ ದೆಸೆಯಲ್ಲೇ ವೈಜ್ಞಾನಿಕ ಮನೋಭಾವನೆ ಜೊತೆಗೆ ಮೂಲ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟಾಗ ಹೊಸ ಹೊಸ ಅವಿಷ್ಕಾರಗಳು ಸಂಶೋಧನೆಗಳು ಬರುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.ನಗರದ ದೀನ ಬಂಧು ಶಾಲಾ ಸಭಾಂಗಣದಲ್ಲಿ ಜಾನ್ ದೇಸಾಯಿಗೌಡರ್ ಫೌಂಡೇಶನ್ ವಿಜ್ಞಾನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ಅದರಲ್ಲೂ ಸರ್ಕಾರಿ ಪ್ರೌಢಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಜೊತೆಗೆ ಅವರಲ್ಲಿರುವ ಮೂಲ ವಿಜ್ಞಾನದ ಪ್ರತಿಭೆಯನ್ನು ಹೊರ ತೆಗೆದು ಅವರಿಂದ ಸಮಾಜಕ್ಕೆ ಬೇಕಾದ ವೈಜ್ಞಾನಿಕ ಕೊಡುಗೆ ನೀಡುತ್ತಿರುವ ಜಾನ್ ದೇಸಾಯಿಗೌಡರ್ ಫೌಂಡೇಶನ್ ವಿಜ್ಞಾನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಸಾಂಪ್ರದಾಯಿಕ ಶಿಕ್ಷಣ ಜ್ಞಾನವನ್ನು ಹೆಚ್ಚಿಸಿದರೆ, ವೈಜ್ಞಾನಿಕ ಶಿಕ್ಷಣ ಜ್ಞಾನದ ಜೊತೆಗೆ ಪ್ರಯೋಗಾತ್ಮಕವಾಗಿ ಫಲಿತಾಂಶವನ್ನು ನೀಡುತ್ತದೆ, ಇದರ ಮಹತ್ವವನ್ನು ಅರಿತೇ ಶಿಕ್ಷಣ ಇಲಾಖೆ ೨೦ ಅಂಕಗಳನ್ನು ಈ ಪ್ರಯೋಗಾತ್ಮಕ ಕ್ರಿಯೆಗಳಿಗೆ ಮೀಸಲಿಟ್ಟಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ, ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ವೈಜ್ಞಾನಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾನ್ ದೇಸಾಯಿಗೌಡರ್ ಫೌಂಡೇಶನ್ ದೀನ ಬಂಧು ಶಾಲಾ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ, ಶಾಲೆಗೆ ಮತ್ತು ವಿದ್ಯಾರ್ಥಿಗಳನ್ನು ತಯಾರಿಸಿದ ಶಿಕ್ಷಕರಿಗೆ ೧,೫೦,೦೦೦ ರು.ಗಳ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಜಿಲ್ಲೆಗೆ ಹೆಮ್ಮೆ ತರುವ ವಿಷಯ ಎಂದರು.ಗ್ರಾಮೀಣ ಶಾಲೆಗಳಾದ ತಾಲೂಕಿನ ಹೆಗ್ಗೋಠಾರ ಸರ್ಕಾರಿ ಪೌಢಶಾಲೆ ವಿದ್ಯಾರ್ಥಿಗಳು ಕೃಷಿಗೆ ಬೇಕಾಗುವ ಸರಳ ಬೆಳೆ ಕಟಾವು ಮಾಡುವ ಯಂತ್ರ ತಯಾರಿಸುವ ಮೂಲಕ ಪ್ರಥಮ ಬಹುಮಾನ ೫೫ ಸಾವಿರ ಪಡೆದರೆ, ಯರಗನಹಳ್ಳಿ ಸರ್ಕಾರಿ ಪೌಢಶಾಲೆ ವಿದ್ಯಾರ್ಥಿಗಳು ಸೊಳ್ಳೆ ನಿಯಂತ್ರಣಕ್ಕೆ ನಾವಿನ್ಯ ನೈಸರ್ಗಿಕ ಪದ್ದತಿಯನ್ನು ಸಂಶೋಧನೆ ಮಾಡಿ ೨ನೇ ಬಹುಮಾನ ೨೫ ಸಾವಿರ ಪಡೆದಿರುವುದು ಅವರ ವೈಜ್ಞಾನಿಕ ಪ್ರತಿಭೆಯನ್ನು ಹೊರಹಾಕಿ, ಮೂಢನಂಬಿಕೆಗಳನ್ನು ದೂರ ಮಾಡಿರುವುದು ಅವರ ಮೂಲ ವಿಜ್ಞಾನದ ಪ್ರತಿಭೆಗೆ ಸಾಕ್ಷಿಯಾಗಿದೆ, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ದೀನಬಂಧು ಟ್ರಸ್ಟಿನ ಕಾರ್ಯದರ್ಶಿ ಪ್ರೊ. ಜಿ ಎಸ್ ಜಯದೇವ್ ಮಾತನಾಡಿ ಚಾಮರಾಜನಗರ ಜಿಲ್ಲೆಯು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದು ಉತ್ತಮ ಸೃಜನಶೀಲತೆಯನ್ನು ಬೆಳೆಸಬೇಕು ಎಂಬ ದೃಷ್ಟಿಯಿಂದ ಖ್ಯಾತ ನಟಿ ಆರತಿ ದಂಪತಿಗಳು ಜಾನ್ ದೇಸಾಯಿಗೌಡರ್ ಫೌಂಡೇಶನ್ ವತಿಯಿಂದ ಕಳೆದ ೫ ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಈ ಬಾರಿ ೧೫ ಸರ್ಕಾರಿ ಪ್ರೌಢಶಾಲೆಗಳು ಈ ವೈಜ್ಞಾನಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದರು.
ಮನುಷ್ಯನ ಕಲ್ಯಾಣಕ್ಕೆ ವಿಜ್ಞಾನ ಅಗತ್ಯವಾಗಿದ್ದು, ಪ್ರತಿವರ್ಷ ಸಂಶೋಧನಾ ಗುಣಮಟ್ಟ ಉತ್ತಮವಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಬೆಳೆದರೆ ದೇಶ ಬೆಳೆದಂತೆ ಎಂದರು.ವಿದ್ಯಾರ್ಥಿಗಳಾದ ಸಿಂಚನಾ, ಉಮಾಮಹೇಶ್ವರಿ ಶಿಕ್ಷಕ ನಂಜುಂಡಸ್ವಾಮಿ, ರವಿಕುಮಾರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮೈಸೂರಿನ ನಿವೃತ್ತ ಪ್ರಾಂಶುಪಾಲ ಡಾ.ಎಸ್ಎನ್ ಪ್ರಸಾದ್, ಇಂಗ್ಲೆಂಡಿನ ವೈದ್ಯ ಡಾ.ನವೀನ್ ಬಹುಮಾನ ವಿತರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಇತರೆ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ವಿತರಣೆ ಮಾಡಲಾಯಿತು.
೨೨ಸಿಎಚ್ಎನ್೧ಚಾಮರಾಜನಗರದ ದೀನ ಬಂಧು ಶಾಲಾ ಸಭಾಂಗಣದಲ್ಲಿ ಜಾನ್ ದೇಸಾಯಿಗೌಡರ್ ಫೌಂಡೇಶನ್ ವಿಜ್ಞಾನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಉದ್ಘಾಟಿಸಿದರು.