ಇತ್ತೀಚಿಗೆ ಫೈಬರ್ ಗಳಲ್ಲಿ ತಯಾರಿಸಿದ ಆಧುನಿಕ ತಮಟೆಗಳು ಚಾಲ್ತಿಗೆ ಬಂದಿರುವುದು ಚರ್ಮ ವಾದ್ಯಗಳ ತಯಾರಿಕೆಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಕಚ್ಚಾವಸ್ತುಗಳ ಬೆಲೆ ದುಬಾರಿಯಾಗಿ ತಯಾರಿಕೆಗೆ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ.

ಕನ್ನಡಪ್ರಭ ವಾರ್ತೆ ಮದ್ದೂರು

ಚರ್ಮದಿಂದ ತಮಟೆ ವಾದ್ಯಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉನ್ನತೀಕರಿಸಬೇಕಿದೆ ಎಂದು ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ತಿಳಿಸಿದರು.

ತಾಲೂಕಿನ ಚಾಮನಹಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟ ವತಿಯಿಂದ ನಡೆದ ಚರ್ಮವಾದ್ಯ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಇತ್ತೀಚಿಗೆ ಫೈಬರ್ ಗಳಲ್ಲಿ ತಯಾರಿಸಿದ ಆಧುನಿಕ ತಮಟೆಗಳು ಚಾಲ್ತಿಗೆ ಬಂದಿರುವುದು ಚರ್ಮ ವಾದ್ಯಗಳ ತಯಾರಿಕೆಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಕಚ್ಚಾವಸ್ತುಗಳ ಬೆಲೆ ದುಬಾರಿಯಾಗಿ ತಯಾರಿಕೆಗೆ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದರು.

ಧಾರ್ಮಿಕ ಪೂಜೆ ಹಬ್ಬ ಸಮಾರಂಭ ಮೆರವಣಿಗೆ ಸಂತೋಷ ಮತ್ತು ದುಃಖ ದ ಕಾರ್ಯಕ್ರಮಗಳಲ್ಲಿ ತಮಟೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಚರ್ಮದಿಂದ ತಮಟೆ ವಾದ್ಯಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳಿಗೆ ಸರ್ಕಾರ ಆದ್ಯತೆ ನೀಡಬೇಕಿದೆ ಎಂದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಚರ್ಮದ ತಮಟೆ ಎಂಬುದು ಒಂದು ದೇಶಿಯ ಕಲೆ. ಯುವ ಪೀಳಿಗೆ ಇಂದು ಜಾನಪದ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವಂತ ಗಮನ ಹರಿಸಬೇಕು ಎಂದರು.

ತಮಟೆ ಬಾರಿಸುವ ಸದ್ದಿಗೆ ಎಂತವರ ಮೈ ರೋಮಾಂಚನಗೊಳ್ಳುತ್ತದೆ. ಕೋಲಾಟ, ನಂದಿ ಕುಣಿತ, ಪಟ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಸೋಮನ ಕುಣಿತ ನಾನಾ ರೀತಿಯ ಕುಣಿತಗಳ ಜಾನಪದ ಸೊಗಡನ್ನು ಶ್ರೀಮಂತ ಗೊಳಿಸುವಲ್ಲಿ ತಮಟೆ ವಾದ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ತಬಲ ಮಂಗಳವಾದ್ಯ ಡೋಲು ಅರೆ ವಾದ್ಯಗಳು ತನ್ನದೇ ಆದ ಇತಿಹಾಸ ವೈಶಿಷ್ಟತೆಗಳನ್ನು ಹೊಂದಿವೆ. ಊರಿನಲ್ಲಿ ನಡೆಯುವ ಸಮಾರಂಭಗಳು, ಪಂಚಾಯಿತಿಗಳಲ್ಲಿ ಜನಗಳಿಗೆ ಮಾಹಿತಿ ತಿಳಿಸಲು ತಮಟೆ ಬಾರಿಸುತ್ತಾ ವಿಷಯ ಸಾರಲು ಅಗತ್ಯವಾಗಿದೆ. ಪ್ರತಿ ಗ್ರಾಮಗಳಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಮತ್ತಷ್ಟು ತಮಟೆ ಬಾರಿಸುವ ಕಲೆ ಪಸರಿಸಲು ಅವಕಾಶವಾಗುತ್ತದೆ ಎಂದರು.

ವೇದಿಕೆಯಲ್ಲಿ ವಕೀಲರು ಮತ್ತು ಮಾದರ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎಸ್.ಆರ್.ಚಂದ್ರಶೇಖರ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೆಗೌಡ, ತರಬೇತಿ ಶಿಕ್ಷಕರಾದ ನಗಾರಿ ಮಂಜು, ಲಿಡ್ಕರ್ ಚೇತನ್ ಶೆಟ್ಟಿ, ಆಯೋಜಕರಾದ ಚಾಮನಹಳ್ಳಿ ಮಂಜು, ಮುಖಂಡರಾದ ಶಾಂತ, ಕುಚೇಲ ಸೇರಿದಂತೆ ಗ್ರಾಮಸ್ಥರು ಮತ್ತು ತರಬೇತಿದಾರರು ಹಾಜರಿದ್ದರು.