ಬೇಸಿಗೆ ಹತ್ತಿರ ಬರುತ್ತಿದ್ದು ಕುಡಿಯುವ ನೀರಿನ ಹಾಗೂ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಬೇಸಿಗೆ ಹತ್ತಿರ ಬರುತ್ತಿದ್ದು ಕುಡಿಯುವ ನೀರಿನ ಹಾಗೂ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ತಾಲೂಕಿನ ದುಗಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರೇಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆಬಾಗಿಲಿಗೆ ಮನೆ ಮಗ ೨೫ನೇ ವಾರದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರೇಹಳ್ಳಿಗೆ ಶಾಶ್ವತವಾಗಿ ನೀರನ್ನು ಹರಿಸಲು ಸಂಬಂಧ ಪಟ್ಟ ನೀರಾವರಿ ಇಲಾಖೆಯ ಎಂಜಿನಿಯರ್‌ ಅವರೊಂದಿಗೆ ಸ್ಥಳದಲ್ಲೇ ಚರ್ಚಿಸಿದರು. ದುಗಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಒಟ್ಟು ಸು.೭೫ಲಕ್ಷಕ್ಕು ಹೆಚ್ಚು ಅನುದಾನದಲ್ಲಿ ಶಾಲೆಕೊಠಡಿ, ಅಂಗನವಾಡಿ ಕಟ್ಟಡ, ರಸ್ತೆದುರಸ್ತಿ, ಗ್ರಂಥಾಲಯ ದುರಸ್ತಿ, ಕೆರೆ ಏರಿ ರಿಪೇರಿ, ಸೇರಿದಂತೆ ನೂತನ ಗ್ರಾಮಪಂಚಾಯಿತಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದ ಅವರು, ಇದೇ ತಿಂಗಳ ೧೬ರಂದು ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಕೇವಲ ಪರೀಕ್ಷೆ ಮಾಡುವದಷ್ಟೇ ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗುವುದು ಅದ್ದರಿಂದ ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಪಿಎಲ್‌ಡಿ ಬ್ಯಾಂಕ್ ನ ಅಧ್ಯಕ್ಷ ಎಚ್.ಅರ್ .ಶಶಿಧರ್ ಮಾತನಾಡಿ ರಾಜ್ಯದಲ್ಲೇ ಈ ರೀತಿಯ ವಿಶೇಷವಾಗಿ ೧೦೦ಜನ ಸ್ಪಂದನಾ ಕಾರ್ಯಕ್ರಮ ಹಾಗೂ ೨೫ವಾರಗಳ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮವನ್ನು ಮಾಡುವ ಮೂಲಕ ತಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ತಿಳಿಯುವಂತಹ ಶಾಸಕರು ಇಲ್ಲ. ನಮ್ಮ ಶಾಸಕರು ಜನರಿಗೆ ಹತ್ತಿರವಾಗಿ ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಇದರಲ್ಲಿ ಯಾವುದೆ ಪಕ್ಷ, ಜಾತಿ, ರಾಜಕೀಯವನ್ನು ಮಾಡದೇ ನಿಮ್ಮ ಯಾವುದೇ ಸಮಸ್ಯೆಗಳ ಬಗ್ಗೆ ಮನವಿಗಳನ್ನು ನೀಡಬಹುದು ಎಂದರು. ಇಒ ದೊಡ್ಡಸಿದ್ದಯ್ಯ ಡಿ ಮಾತನಾಡಿ ರಾಜ್ಯದ ಯಾವುದೇ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾರು ಈ ರೀತಿಯ ಕಾರ್ಯಕ್ರಮಗಳನ್ನು ಮಾಡಿಲ್ಲ. ಇಂದು ೨೫ನೇ ವಾರದ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಜನರ ಮೂಲಭೂತ ಸಮಸ್ಯೆಗಳನ್ನು ತಿಳಿದು ಅಲ್ಲೇ ಪರಿಹಾರ ನೀಡುವುದು ಹಾಗೂ ಜನರಿಂದ ಅಹವಾಲು ಸ್ವೀಕರಿಸುವುದಾಗಿದೆ. ಜನರು ತಮ್ಮಸಮಸ್ಯೆಗಳಿಗೆ ಸಾರ್ವಜನಿಕ ಕಚೇರಿಗಳಿಗೆ ಅಲೆದಾಡಬಾರದು ಎಂದು ಈ ಕಾರ್ಯಕ್ರಮದ ಆಯೋಜಿಸಿದ್ದು ನಿಮ್ಮ ಮನವಿಗಳನ್ನು ನೀಡಬಹುದು ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಮತಾ ಎಂ, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ, ಸದಸ್ಯರುಗಳಾದ ರಂಜಿತಾ, ಪ್ರಿಯಾಂಕ ಸೇರಿದಂತೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ, ಸೇರಿದಂತೆ ಪಿಡಿಒ ಬೈರಪ್ಪ ಮತ್ತಿತರರು ಇದ್ದರು.

ಅದೇ ರೀತಿ ದುಗಡೀಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಾರೇಹಳ್ಳಿ, ಹೆಸರಹಳ್ಳಿ, ವಡೇರಹಳ್ಳಿ, ಸಿದ್ದರಾಮನಗರ, ದುಗಡಿಹಳ್ಳಿ ಗ್ರಾಮಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆದವು.