ಮಕ್ಕಳಿಗೆ ಪ್ರೇರಣಾತ್ಮಕ ಪಾಠ ಮಾಡಿ

| Published : Sep 06 2024, 01:03 AM IST

ಸಾರಾಂಶ

ಫಲಿತಾಂಶ ಸುಧಾರಣೆಗಾಗಿ ಹಾಕಿಕೊಂಡ ಚಟುವಟಿಕೆಗಳ ಬಗ್ಗೆ ಹಾಗೂ ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ತಮ್ಮ ಮಿತಿಯಲ್ಲಿ ವಿಶೇಷ ಚಟುವಟಿಕೆ ಆಯೋಜಿಸುವಂತೆ ಮುಖ್ಯ ಶಿಕ್ಷಕರ ಮನ ಮುಟ್ಟುವಂತೆ ತಿಳಿಸಬೇಕು

ಗದಗ: ಶಿಕ್ಷಕರು ಮಕ್ಕಳಿಗೆ ಪ್ರೇರಣಾತ್ಮಕವಾಗಿ ಪಾಠ ಮಾಡುವ ಮೂಲಕ ಅವರಲ್ಲಿ ಹೊಸ ಚೈತನ್ಯ ಮೂಡಿಸಬೇಕು ಎಂದು ಜಿಪಂ ಸಿಇಒ ಭರತ್ ಎಸ್. ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗದಗ ಶಹರ ವಲಯ ಹಾಗೂ ಗದಗ ಗ್ರಾಮೀಣ ವಲಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಯೋಜನೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಹಾಕಿಕೊಂಡ ಚಟುವಟಿಕೆಗಳು ಮತ್ತು ಉತ್ತಮ ಫಲಿತಾಂಶಕ್ಕಾಗಿ ಮುಂದಿನ ದಿನಗಳಲ್ಲಿ ಪ್ರತಿ ಪ್ರೌಢಶಾಲೆಗಳಲ್ಲಿ ಕೈಗೊಳ್ಳಬೇಕಾದ ವಿನೂತನ ಕ್ರಮಗಳ ಕುರಿತು ಮುಖ್ಯ ಶಿಕ್ಷಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರಿಯಾದ ಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನ, ಚಟುವಟಿಕೆ ಆಧಾರಿತ ಕಲಿಕೆ, ಶಿಸ್ತಿನಿಂದ ಶಾಲಾ ಹಂತದ ಘಟಕ ಪರೀಕ್ಷೆ ಹಾಗೂ ಜಿಲ್ಲಾ ಪರೀಕ್ಷೆ ಸಂಘಟನೆ. ಈ ಎಲ್ಲ ಯೋಜನೆಗಳನ್ನು ಮುಖ್ಯೋಪಾಧ್ಯಾಯರು ಶಾಲಾ ಶಿಕ್ಷಕರೆಲ್ಲರೊಂದಿಗೆ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಫಲಿತಾಂಶ ಸುಧಾರಣೆಗಾಗಿ ಹಾಕಿಕೊಂಡ ಚಟುವಟಿಕೆಗಳ ಬಗ್ಗೆ ಹಾಗೂ ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ತಮ್ಮ ಮಿತಿಯಲ್ಲಿ ವಿಶೇಷ ಚಟುವಟಿಕೆ ಆಯೋಜಿಸುವಂತೆ ಮುಖ್ಯ ಶಿಕ್ಷಕರ ಮನ ಮುಟ್ಟುವಂತೆ ತಿಳಿಸಬೇಕು ಎಂದರು.

ಜಿಲ್ಲೆಯಲ್ಲಿ ಏಕಕಾಲಕ್ಕೆ ನಾಲ್ಕು ವಿಶೇಷ ಪರೀಕ್ಷೆ ನಡೆಸಲಾಗುವುದು. ಪ್ರಶ್ನೆ ಪತ್ರಿಕೆ ಜಿಲ್ಲಾಮಟ್ಟದಲ್ಲಿ ತಯಾರಿಸಿ, ಶಾಲಾ ಹಂತದಲ್ಲಿ ಪರೀಕ್ಷೆ ಸಂಘಟಿಸಿ, ಜಿಲ್ಲಾ ಹಾಗೂ ತಾಲೂಕು ಶಾಲಾ ಮಟ್ಟದಲ್ಲಿ ಎಲ್ಲಾ ಶಾಲೆಗಳ ಮಕ್ಕಳ ಫಲಿತಾಂಶ ವಿಶ್ಲೇಷಣೆ ಮಾಡಲಾಗುವುದು. ಫಲಿತಾಂಶ ಆಧರಿಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಚಟುವಟಿಕೆ ರೂಪಿಸಿ ಎಂದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಜಿ.ಎಲ್.ಬಾರಾಟಕ್ಕೆ, ಆರ್.ಎಸ್.ಬುರಡಿ, ವಿ.ವಿ.ನಡುವಿನಮನಿ ಮುಂತಾದವರು ಹಾಜರಿದ್ದರು.