ಕಾನು ಭೂಮಿ ಸಾಗುವಳಿದಾರರಿಗೆ ಮಾಲೀಕತ್ವ ನೀಡಿ

| Published : Nov 18 2024, 12:02 AM IST

ಸಾರಾಂಶ

ಕೊಡಗಿನ ಬಾನೆ ಭೂಮಿಗೆ ಮಾಲೀಕತ್ವ ನೀಡುವ ಮಾದರಿಯಲ್ಲೆ ಮಲೆನಾಡಿನ ವಿಶೇಷ ಹಕ್ಕುಳ್ಳ ಸೊಪ್ಪಿನಬೆಟ್ಟ, ಕಾನು ಭೂಮಿ ಸಾಗುವಳಿದಾರರಿಗೆ ಮಾಲೀಕತ್ವ ನೀಡಲು ರಾಜ್ಯ ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೊಡಗಿನ ಬಾನೆ ಭೂಮಿಗೆ ಮಾಲೀಕತ್ವ ನೀಡುವ ಮಾದರಿಯಲ್ಲೆ ಮಲೆನಾಡಿನ ವಿಶೇಷ ಹಕ್ಕುಳ್ಳ ಸೊಪ್ಪಿನಬೆಟ್ಟ, ಕಾನು ಭೂಮಿ ಸಾಗುವಳಿದಾರರಿಗೆ ಮಾಲೀಕತ್ವ ನೀಡಲು ರಾಜ್ಯ ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2011ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 2(20) ಹಾಗೂ ಸೆಕ್ಷನ್ 80ಕ್ಕೆ ತಿದ್ದುಪಡಿಯನ್ನು ತಂದು ಕೊಡುಗಿನ ಬಾನೆ ಭೂಮಿಗೆ ಕಂದಾಯ ನಿರ್ಧರಣೆಗೆ ಹಾಗೂ ಮಾಲೀಕತ್ವ ಮಂಜೂರು ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಗೆ 2013ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರಕಿದೆ ಎಂದರು.2011ರ ಬಾನೆ ಭೂಮಿ ತಿದ್ದುಪಡಿಯು ಸಂವಿಧಾನತ್ಮಕವಾಗಿದೆ ಎಂದು ರಾಜ್ಯ ಹೈಕೋರ್ಟ್ ಆದೇಶಿಸಿದೆ. ಕೊಡಗಿನ ಬಾನೆ, ಸೊಪ್ಪಿನಬೆಟ್ಟ, ಕಾನು ಬೆಟ್ಟ ಹಾಗೂ ಇನ್ನಿತರ ಭೂಮಿಗಳ ವಿಶೇಷ ಹಕ್ಕುಳ್ಳ ಭೂಮಿಗಳ ವರ್ಗಕ್ಕೆ ಸೇರಿದ್ದಾಗಿದ್ದು, ಭಾನೆ ಜಮೀನು ಮಾಲಿಕತ್ವಕ್ಕೆ ತಿದ್ದುಪಡಿ, ಕಾನೂನು ಮಾದರಿಯಲ್ಲೇ ಅದೇ ವರ್ಗಕ್ಕೆ ಸೇರಿದ ಸೊಪ್ಪಿನ ಬೆಟ್ಟ ಮತ್ತು ಕಾನೂ ಭೂಮಿಗಳ ಸಾಗುವಳಿ ಹಕ್ಕನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಮೂನೆ 53 ಮೂಲಕ ವಿಶೇಷ ಹಕ್ಕುಳ್ಳ ಭೂಮಿಗಳಲ್ಲಿ ಅಡಿಕೆ, ಕಾಫಿ, ಏಲಕ್ಕಿ, ಮೆಣಸು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದ ಪ್ರದೇಶಗಳನ್ನು ಸಕ್ರಮಗೊಳಿಸಲು 1998ರಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಕಾನೂನಿನಿಂದ ಮಲೆನಾಡಿನ ಸಾವಿರಾರು ಜನ ಸೊಪ್ಪಿನ ಬೆಟ್ಟ ಹಾಗೂ ಕಾನೂ ಭೂಮಿ ಸಾಗುವಳಿದಾರರು ಮಾಲೀಕತ್ವ ಪಡೆದಿದ್ದಾರೆ ಎಂದು ಹೇಳಿದರು.2010ರಲ್ಲಿ ವಿಶೇಷ ಹಕ್ಕುಳ್ಳ ಭೂಮಿಗಳನ್ನು ಅರಣ್ಯ ಭೂಮಿಗಳೆಂದು ಎರಡು ಸುತ್ತೋಲೆ ಹೊರಡಿಸಿದ ಕಾರಣ, ಮಲೆನಾಡಿನ ಸೊಪ್ಪಿನ ಬೆಟ್ಟ, ಕಾನೂ ಭೂಮಿಗಳ ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳು ಮತ್ತು ಮನೆಗಳ ಸಕ್ರಮ ಅರ್ಜಿಗಳು ತಿರಸ್ಕಾರಗೊಂಡು ಅರಣ್ಯ ಭೂಮಿ ಒತ್ತುವರಿದಾರರೆಂದು ಹಣೆಪಟ್ಟಿ ಕಟ್ಟಿಕೊಂಡು, ಭೂಮಿ ಕಳೆದುಕೊಂಡು ನಿರ್ಗತಿಕರಾಗುವ ಆತಂಕ ಎದುರಾಗಿದೆ ಎಂದರು.ಆದ್ದರಿಂದ 2010 ರ ವಿಶೇಷ ಹಕ್ಕುಳ್ಳ ಭೂಮಿಗಳನ್ನು ಅರಣ್ಯ ಭೂಮಿಗಳೆಂದು ಹೊರಡಿಸಿದ ಸುತ್ತೋಲೆಗಳನ್ನು ವಾಪಾಸ್ಸು ಪಡೆದು, 2011 ರ ಕೊಡಗಿನ ಬಾನೆ ಭೂಮಿಯ ಮಾಲೀಕತ್ವ ನೀಡಿದ ತಿದ್ದುಪಡಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಲೆನಾಡಿನ ಸೊಪ್ಪಿನಬೆಟ್ಟ ಕಾನೂ ಭೂಮಿಗಳ ಸಾಗುವಳಿ ಹಕ್ಕು ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಹ ಸೊಪ್ಪಿನಬೆಟ್ಟ ಹಾಗೂ ಕಾನು ಭೂಮಿಗಳ ಸಾಗುವಳಿ ಹಾಗೂ ವಸತಿ ಹಕ್ಕು ಮಂಜೂರು ಮಾಡುವ ಸಲುವಾಗಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ. ಸೊಪ್ಪಿನ ಬೆಟ್ಟ ಹಾಗೂ ಕಾನೂ ಭೂಮಿಗಳ ಸಾಗುವಳಿ ಮತ್ತು ವಸತಿ ಹಕ್ಕಿನ ನಿರೀಕ್ಷೆಯಲ್ಲಿರುವ ಸಾವಿರಾರು ರೈತರಿಗೆ ಭೂಮಿ ಹಕ್ಕನ್ನು ಮಂಜೂರು ಮಾಡಬೇಕು ಎಂದು ಕಂದಾಯ ಸಚಿವರಲ್ಲಿ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಇಕ್ಕೇರಿ ರಮೇಶ್, ಡಿ.ಸಿ. ನಿರಂಜನ್, ಎಸ್. ದಯಾನಂದ್, ನೆರಲೆಕೆರೆ ದಯಾನಂದ್ ಉಪಸ್ಥಿತರಿದ್ದರು.