ಮಿತ್ರಪಕ್ಷ ಡಿಎಂಕೆಯಿಂದ ಅನುಮತಿ ಪತ್ರ ಕೊಡಿಸಿ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ

| Published : Aug 09 2024, 12:30 AM IST

ಮಿತ್ರಪಕ್ಷ ಡಿಎಂಕೆಯಿಂದ ಅನುಮತಿ ಪತ್ರ ಕೊಡಿಸಿ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾದೇಶಿಕ ಪಕ್ಷವನ್ನು ಕಟ್ಟಿಬೆಳೆಸುವುದು ಅಷ್ಟು ಸುಲಭವಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದಲ್ಲಿ ಸದೃಢವಾಗಿ ಜೆಡಿಎಸ್ ಪಕ್ಷವನ್ನು ಬೆಳೆಸಿದ್ದಾರೆ. ನಮ್ಮ ನಾಯಕರು ಕಾಂಗ್ರೆಸ್‌ ಮನೆ ಬಾಗಿಲಿಗೆ ಎಂದೂ ಹೋಗಿಲ್ಲ.

ಕನ್ನಡಪ್ರಭ ವಾರ್ತೆ ಭಾರತೀನಗರ

ಕಾಂಗ್ರೆಸ್ ನಾಯಕರು ತಮ್ಮ ಮಿತ್ರಪಕ್ಷ ಡಿಎಂಕೆಯಿಂದ ಅನುಮತಿ ಪತ್ರ ಕೊಡಿಸಿದರೆ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಮತಿ ಕೊಡಿಸಲು ಸಿದ್ಧರಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಭಾರತೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೇಕೆದಾಟು ಯೋಜನೆ ಮಾಡಿತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಆ ಸವಾಲಿಗೆ ನಾವು ಸಿದ್ಧ. ನಿಮ್ಮ ಮಿತ್ರ ಪಕ್ಷ ಡಿಎಂಕೆಯಿಂದ ಅನುಮತಿ ಪತ್ರ ಕೊಡಿಸಿ 15 ದಿನಗಳಲ್ಲಿ ಯೋಜನೆ ಆರಂಭವಾಗಲಿದೆ ಎಂದು ಸವಾಲು ಹಾಕಿದರು.

ಪ್ರಾದೇಶಿಕ ಪಕ್ಷವನ್ನು ಕಟ್ಟಿಬೆಳೆಸುವುದು ಅಷ್ಟು ಸುಲಭವಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದಲ್ಲಿ ಸದೃಢವಾಗಿ ಜೆಡಿಎಸ್ ಪಕ್ಷವನ್ನು ಬೆಳೆಸಿದ್ದಾರೆ. ನಮ್ಮ ನಾಯಕರು

ಕಾಂಗ್ರೆಸ್‌ ಮನೆ ಬಾಗಿಲಿಗೆ ಎಂದೂ ಹೋಗಿಲ್ಲ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ತಮ್ಮ ಅಧಿಕಾರದ ದಾಹಕ್ಕಾಗಿ 2 ಬಾರಿ ಎಚ್.ಡಿ.ದೇವೇಗೌಡರ ಮನೆಯ ಬಾಗಿಲಿಗೆ ಬಂದು ಸಹಾಯ ಪಡೆದು ಅಧಿಕಾರ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಾದೇಶಿಕ ಪಕ್ಷದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿತೋರಿಸಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ಪಕ್ಷ ಒಂದು ಕಾರ್ಖಾನೆ ಇದ್ದಂತೆ. ಎಷ್ಟೋ ರಾಜಕಾರಣಿಗಳನ್ನು ಹುಟ್ಟುಹಾಕಿದೆ. ಇದೇ ಜೆಡಿಎಸ್ ಪ್ರಾದೇಶಿಕ ಪಕ್ಷದಲ್ಲಿ ಬೆಳೆದು ಇಂದು ಅನ್ಯ ಪಕ್ಷಗಳಿಗೆ ಹೋಗಿ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿರುವುದನ್ನು ನೆನಪಿಸಿಕೊಳ್ಳಬೇಕೆಂದು ಗುಡುಗಿದರು.

ಜೆಡಿಎಸ್ ಬಗ್ಗೆ ಅಪಪ್ರಚಾರ ಮಾಡುವುದನ್ನು ಮೊದಲು ನಿಲ್ಲಿಸಿ. ನಿಮ್ಮ ಪಕ್ಷವನ್ನು ಭದ್ರಗೊಳಿಸಿಕೊಳ್ಳಲು ಚಿಂತನೆ ನಡೆಸಿ ಎಂದು ಆಗ್ರಹಿಸಿದರು.