ಕಳಸ ಬಂಡೂರಿ ಮಹಾದಾಯಿ ಯೋಜನೆಗೆ ಅನುಮತಿ ನೀಡಿ

| Published : Nov 20 2024, 12:30 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳಸ ಬಂಡೂರಿ ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.26 ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಕಾರ್ಮಿಕರ ಎಚ್ಚರಿಕಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳು ಕೂಡ ಹಾಗೆಯೇ ಇವೆ. ವೈಜ್ಞಾನಿಕ ಬೆಲೆ ಇಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನವೂ ಇಲ್ಲ. ವಿದೇಶಿ ಕಂಪನಿಗಳ ಮಾಲ್ ಸಂಸ್ಕೃತಿಯಿಂದಾಗಿ ಸ್ಥಳೀಯ ವ್ಯಾಪಾರಸ್ಥರು, ರೈತರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ವ್ಯಾಪಾರಸ್ಥರು ಅಂಗಡಿ ಮುಚ್ಚಬೇಕಾದ ದುಃಸ್ಥಿತಿ ಬಂದಿದೆ ಎಂದು ಆರೊಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಟ್ಟ ಮಾತಿಗೆ ತಪ್ಪಿ ನಡೆಯುತ್ತಿವೆ. ಚುನಾವಣೆ ಮತ್ತು ರೈತರ ಹೋರಾಟದ ಸಂದರ್ಭಗಳಲ್ಲಿ ಲಿಖಿತ ರೂಪದಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ಬೇಡಿಕೆಗಳು ಹಾಗೆಯೇ ಉಳಿದುಕೊಂಡಿವೆ. ಹೀಗಾಗಿ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ದೇಶದ 500 ಜಿಲ್ಲೆಗಳಲ್ಲಿ ರ್‍ಯಾಲಿ ನಡೆಸಲು ನಿರ್ಧರಿಸಿದೆ ಎಂದು ಹೇಳಿದರು.

ಕಳಸ-ಬಂಡೂರಿ ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಎಂಎಸ್‌ಪಿಯನ್ನು ಕಾನೂನು ಬದ್ಧ ಮಾಡಬೇಕು. ಬೆಳೆ ವಿಮೆ ಜಾರಿಯಾಗಬೇಕು. ವಿದ್ಯುತ್ ಖಾಸಗೀಕರಣ ಆಗಬಾರದು, ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್‌ ಪರಿಗಣನೆ ಮಾಡಬಾರದು. ರೈತರ ಬೆಳೆಗಳಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಮುಳುಗಡೆ ಹಾಗೂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನೀರಾವರಿ ಯೋಜನೆಗಳು ಜಾರಿಯಾಗಬೇಕು. ಕಾರ್ಮಿಕ ವಿರೋಧಿ ಕಾಯ್ದೆ ರದ್ದಾಗಬೇಕು. ಉದ್ಯೋಗ ಭದ್ರತೆ ಸಿಗಬೇಕು. ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಯವರೆಗೆ ಏರಿಸಲಾಗಿದೆ. ಇದನ್ನು ಹಿಂಪಡೆಯಬೇಕು. ಎಲ್ಲರಿಗೂ ಉಚಿತ ಆರೋಗ್ಯ, ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಕೆ.ರುದ್ರೇಶ್, ಎನ್.ಡಿ.ನಾಗರಾಜ್, ಚಂದ್ರಪ್ಪ, ಸೇರಿದಂತೆ ಹಲವರಿದ್ದರು.