ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪರಿಸರ ವ್ಯವಸ್ಥೆಯಲ್ಲಿ ಕೇವಲ ಹುಲಿ, ಚಿರತೆ ಮುಂತಾದ ಪ್ರಾಣಿಗಳಷ್ಟೇ ಅಲ್ಲದೆ, ಬಾವಲಿಗಳಿಗೂ ಸಹ ಪ್ರಾಮುಖ್ಯತೆ ನೀಡಬೇಕಿದೆ ಎಂದುಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಹೇಳಿದರು.
ಖಾನಾಪುರ ಉಪವಿಭಾಗದ ಭೀಮಗಡ ವನ್ಯಜೀವಿ ಧಾಮದ ಹೆಮ್ಮಡಗಾ ಪ್ರಕೃತಿ ಶಿಬಿರದಲ್ಲಿ ವಿಶ್ವ ಬಾವಲಿಗಳ ಪ್ರಶಂಸನಾ ದಿನ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಖಾನಾಪುರ ತಾಲೂಕಿನ ಭೀಮಗಡ ಅರಣ್ಯ ಪ್ರದೇಶದ ಬಾರಾಪೇಡೆ ಗುಹೆಗಳಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ರೋಟನ್ ಫ್ರೀ ಟೇಲ್ಡ್ ಬಾವಲಿಗಳ ಸಂರಕ್ಷಣೆಗಾಗಿ ಕರ್ನಾಟಕ ಅರಣ್ಯ ಇಲಾಖೆ 13 ವರ್ಷಗಳ ಹಿಂದೆಯೇ ಭೀಮಗಡ ಅಭಯಾರಣ್ಯವೆಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕಲ್ಲೋಳಿಕರ ಮಾತನಾಡಿ, ಕಳೆದ ವರ್ಷ ಬಾವಲಿಗಳ ಪ್ರಶಂಸನಾ ದಿನವನ್ನು ಮೊಟ್ಟಮೊದಲ ಬಾರಿಗೆ ಭೀಮಗಡ ವನ್ಯಜೀವಿ ಧಾಮದಲ್ಲಿ ಆಚರಿಸಲಾಗಿದ್ದು, ಈ ವರ್ಷವೂ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ, ಭೀಮಗಡ ಅಭಯಾರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು, ಜಿ.ಎಸ್.ಎಸ್.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಹುಲ್ ಖನೋಲಕರ ಸ್ಥಳೀಯವಾಗಿ ಕಂಡುಬರುವ ಬಾವಲಿಗಳ ಕುರಿತು ಮಾಹಿತಿ ನೀಡಿದರು. ಗಸ್ತು ಅರಣ್ಯ ಪಾಲಕ ಗುಂಡಪ್ಪ ಶಾಮರಾಯ ಅರಣ್ಯ ಮತ್ತು ಅಣಬೆಗಳ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಖಾನಾಪುರ ಉಪ ವಿಭಾಗ ಉಪವಲಯ ಅರಣ್ಯಾಧಿಕಾರಿ ಮಾಳಪ್ಪ ಲಚ್ಯಾಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ, ಭೀಮಗಡ ವನ್ಯಜೀವಿ ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣವರ, ಗಸ್ತು ಅರಣ್ಯ ಪಾಲಕ ಲಕ್ಕಪ್ಪ ರವಳಿ, ಬೆಳಗಾವಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಂದ ಆಗಮಿಸಿದ್ದ 300ಕ್ಕೂ ಅಧಿಕ ವಿದ್ಯಾರ್ಥಿಗಳು, ಬೆಳಗಾವಿ ವಿಭಾಗದ ಎಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಿವಿಧ ವಲಯಗಳ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಭೀಮಗಡ ವನ್ಯಜೀವಿ ವಲಯದ ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.