ಜಾನುವಾರುಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ: ಶಾಸಕ ಕೆ.ಎಂ.ಉದಯ್

| Published : Mar 10 2024, 01:32 AM IST

ಜಾನುವಾರುಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಹೈನುಗಾರಿಕೆ ಅವಲಂಬಿತ ರೈತರು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಹೈನುಗಾರಿಕೆ ಅವಲಂಬಿತ ರೈತರು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.

ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಚಿಕಿತ್ಸಾಲಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲನಕುಪ್ಪೆ ಗ್ರಾಪಂ ತಾಲೂಕು ಕೇಂದ್ರದಿಂದ ಸಾಕಷ್ಟು ದೂರದಲ್ಲಿದೆ. ಜಾನುವಾರುಗಳು ಅನಾರೋಗ್ಯಕ್ಕೀಡಾದರೆ ಮದ್ದೂರು ಅಥವಾ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದ ಪಶು ಆಸ್ಪತ್ರೆಗಳಿಗೆ ಹೋಗಬೇಕಾಗಿತ್ತು ಎಂದರು.

ಸಂಬಂಧಿಸಿದ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಮಲ್ಲನಕುಪ್ಪೆ ಗ್ರಾಮಕ್ಕೆ ಪಶು ಚಿಕಿತ್ಸಾಲಯ ತರುವಲ್ಲಿ ಯಶಸ್ವಿಯಾಗಿದ್ದೇನೆ. ಕೇಂದ್ರಕ್ಕೆ ನುರಿತ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ತುರ್ತು ಸಂದರ್ಭದಲ್ಲಿ ರೈತರ ಮನೆಬಾಗಿಲಿಗೆ ತೆರಳಿ ವೈದ್ಯರು ಜಾನುವಾರುಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಎಸ್. ಸಿ. ಸುರೇಶ್ ಮಾತನಾಡಿ, ಕುರಿಗಾಹಿ ಅಮೃತ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ 273 ಮಂದಿಗೆ 1.75 ಲಕ್ಷ ರು. ಕುರಿ ಸಾಕಾಣಿಕೆ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ನೀಡಲಾಗಿದೆ ಎಂದರು.

ರೋಗಗಳಿಂದ ಅಕಾಲಿಕ ಮರಣಕ್ಕೀಡಾಗುವ ಜಾನುವಾರುಗಳ ಮಾಲೀಕರಿಗೆ ತಲಾ 10 ಸಾವಿರದಂತೆ 41 ಲಕ್ಷ ರು. ಪರಿಹಾರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಬಿ.ಪ್ರವೀಣ್ ಕುಮಾರ್, ಮನ್ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಸಿ.ಪಿ.ರವಿ, ಸದಸ್ಯರಾದ ತಿಮ್ಮಯ್ಯ, ರವಿಕುಮಾರ್, ವಾಸು ಭಾಗವಹಿಸಿದ್ದರು.