ಹಿಂದಿನ ಗುರುಕುಲ ಶಿಕ್ಷಣದಲ್ಲಿ ಕಲಿಸುವ 64 ವಿದ್ಯೆಗಳಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಎಲ್ಲವೂ ಇರುತ್ತಿತ್ತು. ಆದರೆ ಇಂದಿನ ಮಕ್ಕಳಿಗೆ ಪಠ್ಯ, ಪರೀಕ್ಷೆ, ಓದು ಇಷ್ಟನ್ನು ಬಿಟ್ಟು ಬೇರೆ ಏನನ್ನೂ ಹೇಳುತ್ತಿಲ್ಲ. ಮಕ್ಕಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಅತ್ಯವಶ್ಯವಾಗಿದೆ.

ಮುಂಡರಗಿ: ಪಾಲಕರು ಮತ್ತು‌ ಶಿಕ್ಷಕರು ಕೇವಲ ಅಂಕದ ಬೆನ್ನುಹತ್ತಿ ಓಡುತ್ತಿರುವುದು ವಿಷಾದದ ಸಂಗತಿ ಎಂದು ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ತಿಳಿಸಿದರು.

ಜಿಲ್ಲಾ‌ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ವಿ.ಜಿ. ಲಿಂಬಿಕಾಯಿ ಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಗುರುಕುಲ ಶಿಕ್ಷಣದಲ್ಲಿ ಕಲಿಸುವ 64 ವಿದ್ಯೆಗಳಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಎಲ್ಲವೂ ಇರುತ್ತಿತ್ತು. ಆದರೆ ಇಂದಿನ ಮಕ್ಕಳಿಗೆ ಪಠ್ಯ, ಪರೀಕ್ಷೆ, ಓದು ಇಷ್ಟನ್ನು ಬಿಟ್ಟು ಬೇರೆ ಏನನ್ನೂ ಹೇಳುತ್ತಿಲ್ಲ. ಮಕ್ಕಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಅತ್ಯವಶ್ಯವಾಗಿದೆ ಎಂದರು.

ಕಲೋತ್ಸವ ಉದ್ಘಾಟಿಸಿ ಮಾಜಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಮಕ್ಕಳು ಈ ದೇಶದ ಮುಂದಿನ ಭವಿಷ್ಯ. ಹೀಗಾಗಿ ಅವರನ್ನು ಚೆನ್ನಾಗಿ ತಯಾರು ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಕತೆ, ಸಾಹಿತ್ಯ, ಸಂಗೀತ ಇವುಗಳನ್ನು ಅಳವಡಿಸಿಕೊಳ್ಳದ ಮನುಷ್ಯ ಬಾಲ, ಕೊಂಬು ಇಲ್ಲದ ಪಶು ಇದ್ದಂತೆ. ವಿದ್ಯಾರ್ಥಿಗಳು ಯಾವುದಾದರೊಂದು ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಶಾಲಾ ವಾರ್ಷಿಕೋತ್ಸವ ಹೊರತುಪಡಿಸಿದರೆ ಮಕ್ಕಳಿಗೆ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ. ಸರ್ಕಾರ ಪ್ರತಿಭಾ ಕಾರಂಜಿ ಪ್ರಾರಂಭಿಸಿ ಮಕ್ಕಳಲ್ಲಿನ ಪ್ರತಿಭೆ ಹೊರಹಾಕಲು ಅವಕಾಶ ಮಾಡಿಕೊಟ್ಟಿವೆ ಎಂದರು.

ಪುರಸಭೆ ಮಾಜಿ ಸದಸ್ಯರಾಜ ನಾಗರಾಜ ಹೊಂಬಳಗಟ್ಟಿ, ರಾಜಾಸಾಬ್ ಬೆಟಗೇರಿ ಮಾತನಾಡಿದರು. ಡಾ. ಬಿ.ಎಸ್. ಮೇಟಿ, ವೆಂಕಟೇಶ ಕುಲಕರ್ಣಿ, ನಾಗರಾಜ ಹಳ್ಳಿಕೇರಿ, ಶಿವಕುಮಾರ ಸಜ್ಜನರ, ಡಾ. ನಿಂಗು ಸೊಲಗಿ, ಎ.ಡಿ. ಬಂಡಿ, ಎಸ್.ಸಿ. ಹರ್ತಿ, ಬಸವರಾಜ ದೇಸಾಯಿ, ಸಿ.ವಿ. ಪಾಟೀಲ, ವಿಶ್ವನಾಥ ಉಳ್ಳಾಗಡ್ಡಿ, ಎಚ್.ಜೆ. ಪವಾರ, ಎಸ್.ಜಿ. ತೆಗ್ಗಿನಮನಿ ಇತರರು ಇದ್ದರು. ಹನುಮರಡ್ಡಿ ಇಟಗಿ ಸ್ವಾಗತಿಸಿದರು. ಆರ್.ಬಿ. ಗುಡೂರು ನಿರೂಪಿಸಿದರು. ಶಿವಪುತ್ರಪ್ಪ ಇಟಗಿ ವಂದಿಸಿದರು.