ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಸರ್ಕಾರ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ತೋಟಗಾರಿಕಾ ಬೆಳೆಗಳಿಗೂ ನೀಡುವಂತಾಗಬೇಕು. ಆ ಮೂಲಕ ಕೃಷಿಗೆ ಪರ್ಯಾಯವಾಗಿ ತರಕಾರಿ ಬೆಳೆಗೂ ಆದ್ಯತೆ ನೀಡಬೇಕೆಂದು ಕೊಡಗು ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಭಿಪ್ರಾಯಪಟ್ಟರು.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಕುಶಾಲನಗರದ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಗರ ಪ್ರದೇಶಗಳಿಗೆ ಯುವಜನರ ವಲಸೆ ಹೆಚ್ಚಾಗುತ್ತಿರುವುದರಿಂದಾಗಿ ಗ್ರಾಮೀಣ ಪ್ರದೇಶಗಳು ಹಿರಿಯರಿಗೆ ಮಾತ್ರ ಸೀಮಿತವಾಗಿ ವೃದ್ದಾಶ್ರಮಗಳಾಗುತ್ತಿದೆ ಎಂದು ವಿಷಾದಿಸಿದ ಅವರು ಯುವಪೀಳಿಗೆ ತಮಗೆ ತಿಳಿದಿರುವ ಆಧುನಿಕ ಮಾಧ್ಯಮಗಳ ಉಪಯೋಗವನ್ನು ಕೃಷಿ ವಲಯದ ಪ್ರಗತಿಗೂ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.ಯುವಕರು ಮರಳಿ ಕೃಷಿಗೆ: ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಜರುಗಿದ ಕೆಲವು ಉತ್ತಮ ಸಂಗತಿಗಳಲ್ಲಿ, ನಗರದಿಂದ ಸ್ವಗ್ರಾಮಗಳಿಗೆ ಅನಿವಾರ್ಯವಾಗಿ ಮರಳಿ ಬಂದ ಯುವಪೀಳಿಗೆ ನಂತರದ ದಿನಗಳಲ್ಲಿ ಕೖಷಿಯತ್ತ ಆಸಕ್ತಿ ವಹಿಸಿರುವುದೂ ಒಂದಾಗಿದೆ. ಇಂದಿಗೂ ವರ್ಕ್ ಫ್ರಂ ಹೋಂನಿಂದಾಗಿ ಅನೇಕರು ತೋಟಗಳಲ್ಲಿಯೇ ಇದ್ದುಕೊಂಡು ಉದ್ಯೋಗ ಮತ್ತು ಕೃಷಿಯನ್ನು ನಿರ್ವಹಿಸುತ್ತಿರುವುದು ಆಶಾದಾಯಕವಾಗಿದೆ ಎಂದರು.

ಸುಂಟಿಕೊಪ್ಪದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಕೃಷಿ ಎನ್ನುವುದು ಬಹಳ ದೊಡ್ಡ ತತ್ವವಾಗಿದೆ. ಕೃಷಿಯಲ್ಲಿ ಕೆಲಸ ಮಾಡುತ್ತಲೇ ಕೆಲಸ ಕಲಿಯಲಾಗುತ್ತದೆ. ಹೀಗಾಗಿಯೇ ಕೃಷಿಕರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಎಂದರು. ದಾನಿ, ಗುಡ್ಡೆಹೊಸೂರಿನ ಉದ್ಯಮಿ ಮಂಡೆಪಂಡ ಚಿಮ್ಮ ಉತ್ತಪ್ಪ ಮಾತನಾಡಿ, ಕುಶಾಲನಗರ ಪತ್ರಕರ್ತರ ಸಂಘ ರೈತರಿಗಾಗಿ ರೂಪಿಸಿರುವ ನೇಗಿಲಯೋಗಿ ದತ್ತಿ ಪ್ರಶಸ್ತಿಗೆ ತಾನು ಕೂಡಾ 25 ಸಾವಿರ ರು. ನೀಡುವುದಾಗಿ ಘೋಷಿಸಿದರು.ಚಿಕ್ಕಬೆಟ್ಟಗೇರಿಯ ಉದ್ಯಮಿ, ದಾನಿ ಎಂ.ಎಸ್.ರಂಜಿತ್ ಮುಖ್ಯ ಅತಿಥಿಯಾಗಿದ್ದರು.ಬ್ಯಾಂಕಿಂಗ್, ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತು ವೃತ್ತಿ ಮಾರ್ಗದರ್ಶಕ, ಬೆಂಗಳೂರಿನ ಆರ್.ಕೆ.ಬಾಲಚಂದ್ರ ಅವರು ‘ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮ-ಹಲವು ಆಯಾಮಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಈ ಬಾರಿಯ ನೇಗಿಲಯೋಗಿ ಪ್ರಶಸ್ತಿಗೆ ಭಾಜರಾದ ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಪಿ. ಉದಯಕುಮಾರ್, ಕೃಷಿ ಮತ್ತು ಹೈನುಗಾರಿಕೆಗಾಗಿ ಮಳ್ಳೂರಿನ ಶಂಕರನಾರಾಯಣ, ಪ್ರಗತಿಪರ ಮಹಿಳಾ ಕೃಷಿಕರಾದ ಮಣಜೂರಿನ ಭವಾನಿ ಎಂ.ಜಿ.ಕುಮಾರಸ್ವಾಮಿ, ಬಾಳುಗೋಡುವಿನ ಸಮಗ್ರ ಕೃಷಿಕ ನಂಗಾರು ಜಗ ಅವರನ್ನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಲಹೆಗಾರ ಕೆ.ತಿಮ್ಮಪ್ಪ ನಿರೂಪಿಸಿದರು. ಖಜಾಂಚಿ ಕೆ.ಎಸ್. ಅನಿಲ್ ಕುಮಾರ್ ಸ್ವಾಗತಿಸಿದರು. ನಿರ್ದೇಶಕ ಸಿಲ್ವೆಸ್ಟರ್ ಪ್ರಾರ್ಥಿಸಿದರು. ವಿಶ್ವಕುಮಾರ್, ರವಿಕುಮಾರ್, ಆಲ್‌ಫ್ರೆಡ್ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಉಪಾಧ್ಯಕ್ಷ ನವೀನ್ ಚಿಣ್ಣಪ್ಪ ವಂದಿಸಿದರು. ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ನಿರ್ದೇಶಕರಾದ ಶಿವಣ್ಣ, ಜಿ.ಕೆ.ಬಾಲಕೃಷ್ಣ, ಎಂ.ಎಸ್.ಸುನಿಲ್, ಸೋನ್ಸ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಮತ್ತಿತರರು ಹಾಜರಿದ್ದರು.ಸಂತಾಪ: ಗೌಡ ಸಮುದಾಯದ ಮುಖಂಡ, ಹಿರಿಯ ಲೇಖಕ ಅನಂತ ರಾಜೇಗೌಡ ಅವರ ನಿಧನಕ್ಕೆ ಪತ್ರಕರ್ತರ ಸಂಘದ ವತಿಯಿಂದ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.