ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ರಾಸಾಯನಿಕ ಗೊಬ್ಬರದಿಂದ ಬೆಳೆದು ತಯಾರಾದ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ. ಇದು ಮನುಷ್ಯರಲ್ಲಿ ರೋಗ ರುಜನೆಗಳಿಗೆ ಕಾರಣವಾಗುತ್ತಿವೆ. ಕೃಷಿಕರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ವಿ.ಅಶೋಕ್ ಕರೆ ನೀಡಿದರು.ಯತ್ತಂಬಾಡಿ ಗ್ರಾಮದ ವೈ.ಎಚ್.ಕೃಷ್ಣೇಗೌಡರ ತೋಟದ ಆವರಣದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ 1.5 ಲಕ್ಷ ಎಕರೆಯಷ್ಟು ಭತ್ತ, 1.40 ಲಕ್ಷ ಎಕರೆಯಷ್ಟು ಕಬ್ಬು ಮತ್ತು ಉಳಿದ ಭೂಮಿಯಲ್ಲಿ ಇತರ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಮಳೆ ಆಶ್ರಿತ ಮತ್ತು ಬೋರ್ ವೆಲ್ ಗಳ ನೀರು ಬಳಕೆಯಿಂದ ಡ್ರಿಪ್ಪಿಂಗ್ ಮರ್ಚಿಂಗ್ ಹೊದಿಕೆ ಕ್ರಮಗಳಿಂದ ಬೇಕಾದ ಬೆಳೆ ಬೆಳೆಯಲು, ಸಾವಯವ ಪದ್ಧತಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ನಾವು ಮತ್ತು ನಮ್ಮ ಭೂಮಿ ರಸಗೊಬ್ಬರ ಬಳಕೆಗೆ ಒಗ್ಗಿದ್ದೇವೆ. ಒಮ್ಮೆಲೆ ಸಾವಯವ ಪದ್ಧತಿ ಸಾಧ್ಯವಿಲ್ಲ ಎಂಬ ಭಾವನೆ ಬಿಟ್ಟು ಭೂಮಿಗೆ ವಿಷ ನೀಡಿದರೆ ನಮಗೆ ಸಿಗುವುದು ವಿಷವೇ. ಸಾವಯವ ಕೃಷಿ ಅಳವಡಿಸಿಕೊಂಡು ಉತ್ತಮ ಲಾಭ ಗಳಿಸಿ ಎಂದು ತಿಳಿಸಿದರು.ಮಳವಳ್ಳಿ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ರೈತರು ತಮ್ಮಲ್ಲಿನ ಕೀಳರಿಮೆ ಬಿಟ್ಟು ಎರಡನೇ ಶನಿವಾರ ನಮ್ಮ ಸಂಘದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ನಾಲ್ಕು ಜನ ಸದಸ್ಯರಿಂದ ಆರಂಭವಾದ ಸಂಘ ಇಂದು 214 ಸದಸ್ಯರು ಜೊತೆಯಾಗಿದ್ದಾರೆ. ಎಲ್ಲರೂ ಒಗ್ಗೂಡಿ ಭೂಮಿಗೆ ರಾಸಾಯನಿಕ ಬಳಕೆ ಕೈಬಿಟ್ಟು ಸಾವಯವ ಕೃಷಿ ಮೂಲಕ ಒಂದು ಸದೃಢ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.
ಮಂಡ್ಯ ಸಹಾಯಕ ಕೃಷಿ ನಿರ್ದೇಶಕಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಜಿ.ಟಿ.ಸೌಮ್ಯಶ್ರೀ ಮಾತನಾಡಿ, ಹೆಣ್ಣು ಮಕ್ಕಳು ಸಮಾರಂಭಗಳಲ್ಲಿ ಅರಿಶಿಣ ಕುಂಕುಮದ ಜೊತೆಗೆ ಸಾವಯವ ಕೃಷಿಯಿಂದ ಬೆಳೆದ ಬೆಳೆಗಳ ಬೀಜಗಳನ್ನು ಪ್ಯಾಕೆಟ್ ಮಾಡಿ ಕೊಡುವ ಮೂಲಕ ಕೃಷಿಯಲ್ಲಿ ವೈವಿಧ್ಯತೆಯನ್ನು ತರಬಹುದು ಎಂದರು.ರೈತ ಮಹಿಳೆಯರು ಸಾವಯವ ಕೃಷಿಯಲ್ಲಿ ಬೆಳೆದ ಬೆಳೆ ಉತ್ಪನ್ನ, ಬೀಜಗಳು, ಮಾರಾಟ ಮಾಡಲು ಅನುಕೂಲವಾಗುವಂತೆ ಪ್ಯಾಕೆಟ್ ಸೀಲಿಂಗ್, ಪ್ಯಾಕೆಟ್ ಬ್ರಾಂಡಿಂಗ್ ಗೆ ಅನುಕೂಲ ವಾಗುವಂತೆ ಮಿಷಿನ್ ಗಳನ್ನು ನಮ್ಮ ಇಲಾಖೆಯಿಂದ ಕೊಡಲಾಗುತ್ತದೆ. ನಿಮ್ಮದೇ ಮನೆತನದ ಹೆಸರನ್ನು ಇಟ್ಟು ನಿಮ್ಮದೇ ಬ್ರಾಂಡ್ ತಯಾರಿ ಮಾಡಿಕೊಂಡು ಮಾರಾಟ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸೌಮ್ಯಶ್ರೀ ಅವರಿಗೆ ಹುಟ್ಟುಹಬ್ಬದ ಅಂಗವಾಗಿ ಸಂಘದ ವತಿಯಿಂದ ಕೊಬ್ಬರಿ ಬೆಲ್ಲ ಅರಿಶಿನ ಕುಂಕುಮ ನೀಡಿ ಸನ್ಮಾನಿಸಲಾಯಿತು. ಸಾವಯವ ಕೃಷಿ ಅಳವಡಿಸಿಕೊಂಡ ಬೆಳೆಗಾರರು ತಾವು ಬೆಳೆದ ವಿವಿಧ ಬಗೆಯ ಸೊಪ್ಪುಗಳು, ತರಕಾರಿ, ಶುದ್ದ ಹಸುವಿನ ತುಪ್ಪ, ಸಾವಯವ ಬೆಲ್ಲ ಸೇರಿದಂತೆ ಹಲವು ಬಗೆಯ ಪದಾರ್ಥಗಳನ್ನು ಮಾರಾಟ ಮಾಡಿದರು.ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ರಾಜೇಶ್, ರೈತ ಮುಖಂಡರಾದ ಕಾರಸವಾಡಿ ಮಹದೇವು, ವೈ.ಎಚ್.ಕೃಷ್ಣ, ಸಿ.ಚಿಕ್ಕಸ್ವಾಮಿ, ಚಿಕ್ಕೇಗೌಡ, ಅಲಕೆರೆ ರೈತರ ಶಾಲೆ ಸಂಸ್ಥಾಪಕ ಸತ್ಯಮೂರ್ತಿ, ನಾಗಣ್ಣ, ಕಾರ್ಯದರ್ಶಿ ಚಿಕ್ಕಣ್ಣ, ರೈತರಾದ ಶಿವಮಾದೇಗೌಡ, ರವಿ, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.