ಜ್ಞಾನದ ಜೊತೆಗೆ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಿ

| Published : Nov 11 2024, 11:46 PM IST

ಸಾರಾಂಶ

ಅನುಕರಣೆಯೇ ಯುಗ ಧರ್ಮವಾಗಿರುವ ಕಾಲದಲ್ಲಿ ಜ್ಞಾನ ನಿರ್ಮಾಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಮೌಲ್ಯಯುತವಾದ ವ್ಯಕ್ತಿತ್ವ ನಿರ್ಮಾಣಕ್ಕೂ ಕೊಡಬೇಕು ಎಂದು ವಿವಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಹರಿಪ್ರಸಾದ್ ಟಿ. ಎನ್. ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಅನುಕರಣೆಯೇ ಯುಗ ಧರ್ಮವಾಗಿರುವ ಕಾಲದಲ್ಲಿ ಜ್ಞಾನ ನಿರ್ಮಾಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಮೌಲ್ಯಯುತವಾದ ವ್ಯಕ್ತಿತ್ವ ನಿರ್ಮಾಣಕ್ಕೂ ಕೊಡಬೇಕು ಎಂದು ವಿವಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಹರಿಪ್ರಸಾದ್ ಟಿ. ಎನ್. ಹೇಳಿದರು.ತುಮಕೂರು ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುಣಾತ್ಮಕ ಶಿಕ್ಷಣಕ್ಕೆ ಉತ್ತೇಜನ ಕುರಿತು ವಿಶೇಷ ಉಪನ್ಯಾಸ ನೀಡಿದರು.ಮಾನವೀಯತೆಯ ಬೀಜವನ್ನು ಬಿತ್ತುವ, ಬೆಳಗಿಸುವ ನೈತಿಕ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ವರ್ತಮಾನದಲ್ಲಿ ಮಾಯವಾಗಿದೆ. ಈವರೆಗೂ ಬಂದಿರುವ ಶಿಕ್ಷಣ ನೀತಿಗಳಿಗೂ ಮೀರಿದ್ದಾಗಿತ್ತು. ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿ. ಸುಗುಣರನ್ನಾಗಿಸುವ ಶಿಕ್ಷಣ ಕ್ರಮವನ್ನು ಶಿಕ್ಷಣ ನೀತಿಗಳು ಗೊಂದಲ ಸೃಷ್ಟಿಸಿ ಶಕ್ತಿಹೀನವಾಗಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.ಮೆಕಾಲೆ ಪರಿಚಯಿಸಿದ ಶಿಕ್ಷಣ ಪದ್ಧತಿಗಿಂತಲೂ ವ್ಯಕ್ತಿತ್ವಕ್ಕೆ ಬೆಳಕು ಚೆಲ್ಲುವ ಭಾರತದ ಶಿಕ್ಷಣಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಗಾಂಧೀಜಿ, ಅಂಬೇಡ್ಕರ್‌ ಅವರಂತಹ ಉತ್ಕೃಷ್ಟ ವ್ಯಕ್ತಿತ್ವಗಳು, ರಾಜಕೀಯದಲ್ಲಿ ಶುದ್ಧವಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಮೌಲಿಕ ಬದುಕೇ ಗುಣಾತ್ಮಕ ಶಿಕ್ಷಣಕ್ಕೆ ಉತ್ತೇಜನ ಎಂದು ತಿಳಿಸಿದರು.ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿದರು. ಕುಲಸಚಿವೆ ನಾಹಿದಾ ಜಮ್‌ ಜಮ್, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಸಂಯೋಜಕ ಡಾ. ಎ. ಎಂ. ಮಂಜುನಾಥ ಉಪಸ್ಥಿತರಿದ್ದರು.