ದೇಶಪಾಂಡೆ ಫೌಂಡೇಶನ್ ವತಿಯಿಂದ ಉದ್ಯಮ ರಂಗಕ್ಕೆ ಸಿದ್ಧರಾಗಿರುವ ಪದವೀಧರ ಯುವಕರಿಗೆ ಉನ್ನತ ಶಿಕ್ಷಣದ ಮರುಕಲ್ಪನೆ ವಿಷಯದ ಕುರಿತು ಕೌಶಲ್ಯ ಯಶಸ್ವಿಯಾಗಿ ನಡೆಯಿತು.
ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ವತಿಯಿಂದ ಉದ್ಯಮ ರಂಗಕ್ಕೆ ಸಿದ್ಧರಾಗಿರುವ ಪದವೀಧರ ಯುವಕರಿಗೆ ಉನ್ನತ ಶಿಕ್ಷಣದ ಮರುಕಲ್ಪನೆ ವಿಷಯದ ಕುರಿತು ಕೌಶಲ್ಯ ಸಂವಾದ ಕಾರ್ಯಕ್ರಮ ಎರಡನೇಯ ದಿನವಾದ ಶನಿವಾರ ಇಲ್ಲಿನ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು. ವಿವಿಧ ವಿಷಯದ ಬಗ್ಗೆ ತಜ್ಞರು ಹಾಗೂ ಉದ್ಯಮಿಗಳು ಮಾಹಿತಿ ನೀಡಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಮುಂದುವರೆದ ದೇಶಗಳಾ ಜಪಾನ್, ಚೀನಾದಂತಹ ದೇಶಗಳಲ್ಲಿ ಪ್ರೌಢಶಾಲೆಯ ಹಂತದಲ್ಲಿಯೇ ಮಕ್ಕಳು ಕೌಶಲ್ಯ ಪೂರ್ಣರಾಗಿರುತ್ತಾರೆ. ಈ ದಿಸೆಯಲ್ಲಿ ಪಠ್ಯಕ್ರಮದಲ್ಲಿ ಪ್ರಾಯೋಗಿಕತೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಉದ್ಯಮ ವಲಯದ ತಜ್ಞರು ಇರುವ ಪಠ್ಯಕ್ರಮ ಸಮಿತಿ ಇರಬೇಕು. ಇದರಿಂದ ವಿದ್ಯಾರ್ಥಿಗಳಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.ಬೇಡಿಕೆ ಇರುವ ಕೋರ್ಸ್
ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಿಗೆ ಬಹು ದೊಡ್ಡ ಸಂಬಳ ನೀಡಲಾಗುತ್ತದೆ. ಅದಕ್ಕೆ ತಕ್ಕನಾಗಿ ಅವರು ಕೂಡ ಕೆಲಸ ಮಾಡಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಬೇಡಿಕೆ ಇರುವ ಕೋರ್ಸ್ ಜಾರಿಗೆ ತರಬೇಕಿದೆ. ಇಲ್ಲದೇ ಹೋದರೆ ಯಾವುದೇ ಪದವಿ ನೀಡಿದರೂ ಅದು ಉಪಯುಕ್ತ ಆಗುವುದಿಲ್ಲ. ಇಂದು ಪದವಿಯ ಜತೆಗೆ ಉತ್ತಮ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು.ಪಠ್ಯಕ್ರಮ ಪರಿಶೀಲಿಸಿ
ಗುಲ್ಬರ್ಗಾ ವಿವಿ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿ ಯಾವುದೇ ಇರಲಿ ಪಠ್ಯಕ್ರಮವನ್ನು ಒಂದೊಮ್ಮೆ ಪುನಃ ಪರಿಶೀಲಿಸುವುದು ಅಗತ್ಯವಿದೆ. ಪ್ರಾಯೋಗಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಇದಕ್ಕಾಗಿ ಮಾದರಿಯೊಂದನ್ನು ಸಿದ್ಧಪಡಿಸಬೇಕು. ಪರೀಕ್ಷಾ ಪದ್ಧತಿ ಸುಧಾರಣೆ ಆಗಬೇಕು ಆಸಕ್ತ ಯುವಜನತೆಗೆ ಸರಿಯಾದ ಮಾರ್ಗದರ್ಶನ ಮಾಡಬೇಕಿದೆ. ಕೌಶಲ್ಯ ಪಠ್ಯಕ್ರಮದ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು.ಪರಾಮರ್ಶೆ ಮಾಡಿ
ಪಿಜಿಸಿ ಡಿಜಿಟಲ್ ಹಾಗೂ ಪ್ರದೀಪ ಐಟಿ ಲಿಮಿಟೆಡ್ ಸಹ ಸಂಸ್ಥಾಪಕ ವಿನೋದ ಬೇಲಿ, ವಿಶ್ವವಿದ್ಯಾಲಯಗಳಲ್ಲಿ ಬಹಳಷ್ಟು ಕೋರ್ಸ್‌ಗಳು ಇರುತ್ತವೆ. ಇವುಗಳಿಂದ ವಿದ್ಯಾರ್ಥಿಗಳಿಗೆ ಎಷ್ಟು ಅನುಕೂಲ, ಅವು ಎಷ್ಟು ಬಳಕೆಯಾಗುತ್ತಿವೆ ಎಂಬುದರ ಕುರಿತು ಪರಾಮರ್ಶೆ ಮಾಡಬೇಕಿದೆ. ಜತೆಗೆ ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ಕೈಗಾರಿಕೆಗೆ ಪೂರಕವಾಗಿಸುವಲ್ಲಿ ಎಲ್ಲರೂ ಹೊಣೆ ಹೊರಬೇಕಿದೆ ಎಂದರು.ಆರಂಭಿಕ ತರಬೇತಿ
ಇನ್ಫೋಸಿಸ್ ಫೌಂಡೇಷನ್ ಸಿಎಸ್‌ಆರ್ ಮ್ಯಾನೇಜರ ಕ್ಯಾಪ್ಟನ್ ಶಾಂತಿ, ವಿದ್ಯಾರ್ಥಿಗಳಲ್ಲಿ ಸದಾ ಹೊಸತನ್ನು ಕಲಿಯುವ ಆಸಕ್ತಿ ಇರಬೇಕು. ಒಂದಿಷ್ಟು ಕೌಶಲ್ಯ ಕಲಿಸಿದರೆ ಕೈಗಾರಿಕೆಗೆ ಬೇಕಾದಂತೆ ಅವರನ್ನು ಸಿದ್ಧಪಡಿಸಬಹುದು. ಇದಕ್ಕಾಗಿ ಆರಂಭಿಕ ತರಬೇತಿ ಮಹತ್ವದ್ದಾಗಿದೆ. ಆಸಕ್ತಿ ಇದ್ದಲ್ಲಿ ಇದನ್ನು ಜಾರಿ ಮಾಡಬಹುದು. ವಿವಿಗಳೂ ಕೈಗಾರಿಕೆ ಮತ್ತು ಶಿಕ್ಷಣದ ಮಧ್ಯದ ಅಂತರ ತುಂಬಲು ಪ್ರಯತ್ನ ಮಾಡಬೇಕು ಎಂದರು.ದೇಶಪಾಂಡೆ ಸ್ಕಿಲ್ಲಿಂಗ್ ಸಿಇಒ ಪಿ. ನರಸಿಂಹ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಉದ್ಯಮಿಗಳು ಹಾಗೂ ಪದವಿಧರ ವಿದ್ಯಾರ್ಥಿಗಳು ಹಾಜರಿದ್ದರು.