ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕರ್ನಾಟಕ ರಕ್ಷಣಾ ವೇದಿಕೆಯು ಸಂಸ್ಥಾಪಕ ಅಧ್ಯಕ್ಷ ಎಚ್.ಶಿವರಾಮೇಗೌಡರ ನೇತೃತ್ವದಲ್ಲಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅವರ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕನ್ನಡಪರ ಹೋರಾಟ, ಕಾರ್ಯಕರ್ತರ ಸಮಾವೇಶ, ಕನ್ನಡಪರ ಕಾರ್ಯಕ್ರಮ ನಿರಂತರವಾಗಿ ಏರ್ಪಡಿಸುತ್ತಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಕರವೇ ಸಂಘಟನೆ ಬಲವರ್ಧನೆಗೆ ಒತ್ತು ನೀಡಲಾಗಿದ್ದು, ನೂತನ ಪದಾಧಿಕಾರಿಗಳು ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬುವ ಮೂಲಕ ಸಮರ್ಥವಾಗಿ ಮುನ್ನಡಿಸಬೇಕು ಎಂದು ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ಹೇಳಿದರು.ಅಥಣಿ ಪಟ್ಟಣದಲ್ಲಿ ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರವೇ ಸಂಘಟನೆಯ ಅನೇಕ ಶಾಖೆಗಳು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕನ್ನಡದ ಸೇವೆ, ಕನ್ನಡಿಗರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸಂಘಟನೆಯ ಸಂಸ್ಥಾಪಕರು ನನಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಂಘಟನೆಯ ಬಲವರ್ಧನೆಗೆ ಒತ್ತು ನೀಡಲು ಆದೇಶಿಸಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆ ಇನ್ನಷ್ಟು ಹೆಚ್ಚಿಸಲಾಗುವುದು. ಇಲ್ಲಿಯ ಸಮಸ್ಯೆಗಳ ವಿರುದ್ಧ ಹೋರಾಟ ಹಮ್ಮಿಕೊಂಡ ಸರ್ಕಾರದ ಗಮನ ಹರಿಸಲಾಗುವುದು ಎಂದರು.ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನ್ನಪೂರ್ಣಾ ಅಶೋಕರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಿ ಎನ್ನುವ ಪರಿಸ್ಥಿತಿ ಬಂದಿದೆ. ಅನ್ಯ ಭಾಷೆ ಗೌರವಿಸಬೇಕು, ಮಾತೃಭಾಷೆಪ್ರೀತಿಸಬೇಕು. ಕನ್ನಡವನ್ನು ನಾವು ನಿತ್ಯ ಬಳಸಿದಾಗ ಮಾತ್ರ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕರವೇ ಸಂಘಟನೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಚಟುವಟಿಕೆ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಮಾತನಾಡಿದರು. ಅಥಣಿ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಮತ್ತು ಕನ್ನಡ ಬಾವುಟ ನೀಡಿ ಜವಾಬ್ದಾರಿ ಹಸ್ತಾಂತರಿಸಲಾಯಿತು. ಅಥಣಿ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಉದಯ ಮಾಕಾಣಿ ಮಾತನಾಡಿದರು.ಜಿಲ್ಲಾ ಗೌರವಾಧ್ಯಕ್ಷ ಜಗನ್ನಾಥ ಭಾಮನೆ, ರೇಣುಕಾ, ಶಾಹಿದ್ ಅಟೇಲ್, ಮಾರುತಿ ಮನೋಜ್, ಸಿದ್ದು ಹಂಡಗಿ, ಕುಮಾರ್ ಬಡಿಗೇರ, ಸತೀಶ ಯಲ್ಲಟ್ಟಿ, ಶಂಕರ ಮಗದುಮ, ಮಹಾಂತೇಶ ಹಲವಾಯಿ, ಅನಿಲ ಪಾಟೀಲ, ರಾಜು ವಾಘಮಾರೆ, ಸುಕುಮಾರ ಮಾದರ, ಪರಶುರಾಮ ಕಾಂಬಳೆ, ಜಿಶಾನ್ ಮುಜಾವರ, ಮುತ್ತಣ್ಣ ಗೊಲ್ಲರ, ಮಹಾದೇವಿ ಹೋಳಿಕಟ್ಟಿ, ಭೀಮವ್ವ ದಂಡಗಿ, ಶೋಭಾ ಮಾಳಿ ಇನ್ನಿತರರು ಇದ್ದರು. ಉದಯ ಮಾಕಾಣಿ ಸ್ವಾಗತಿಸಿದರು. ಅಣ್ಣಾಸಾಬ ತೆಲಸಂಗ ನಿರೂಪಿಸಿದರು.ರಾಜು ವಾಘಮಾರೆ ವಂದಿಸಿದರು.