ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ: ಹಾಸನದ ನಿವೃತ್ತ ಖಜಾನಾಧಿಕಾರಿ ರಾಮ್ ಗಿರಿ ನಾಯಕ್

| Published : Jun 13 2024, 12:54 AM IST

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ: ಹಾಸನದ ನಿವೃತ್ತ ಖಜಾನಾಧಿಕಾರಿ ರಾಮ್ ಗಿರಿ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಹೆಚ್ಚಿನ ರೀತಿಯಲ್ಲಿ ಮಹತ್ವ ನೀಡಬೇಕು ಎಂದು ಹಾಸನದ ನಿವೃತ್ತ ಖಜಾನಾಧಿಕಾರಿ ರಾಮ್ ಗಿರಿ ನಾಯಕ್ ತಿಳಿಸಿದರು. ಹಳೆಬೀಡಿನಲ್ಲಿ ಬಂಡಿಲಕ್ಕನ ಕೊಪ್ಪಲಿನಲ್ಲಿ ಆಯೋಜಿಸಿದ್ದ ೧ರಿಂದ ೭ನೇ ತರಗತಿಯ ಮಕ್ಕಳಿಗೆ ಶಾಲಾ ಸಾಮಗ್ರಿ ನೋಟ್ ಬುಕ್, ಶಾಲಾ ಬ್ಯಾಗ್, ಹಾಗೂ ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೇಖನ ಸಾಮಗ್ರಿ ವಿತರಣೆ । ಶಿಕ್ಷಣ ಪ್ರೇಮಿಗಳಿಂದ ಕಾರ್ಯಕ್ರಮ ಆಯೋಜನೆ

ಕನ್ನಡಪ್ರಭ ವಾರ್ತೆ ಹಳೆಬೀಡು

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಹೆಚ್ಚಿನ ರೀತಿಯಲ್ಲಿ ಮಹತ್ವ ನೀಡಬೇಕು ಎಂದು ಹಾಸನದ ನಿವೃತ್ತ ಖಜಾನಾಧಿಕಾರಿ ರಾಮ್ ಗಿರಿ ನಾಯಕ್ ತಿಳಿಸಿದರು.

ಹಳೆಬೀಡು ಸಮೀಪ ಬಂಡಿಲಕ್ಕನ ಕೊಪ್ಪಲಿನಲ್ಲಿ ಆಯೋಜಿಸಿದ್ದ ೧ರಿಂದ ೭ನೇ ತರಗತಿಯ ಮಕ್ಕಳಿಗೆ ಶಾಲಾ ಸಾಮಗ್ರಿ ನೋಟ್ ಬುಕ್, ಶಾಲಾ ಬ್ಯಾಗ್, ಹಾಗೂ ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಹಿಂದೆ ಎಲ್ಲಾ ಹಳ್ಳಿಗಳಲ್ಲಿ ಶಾಲೆ ಇಲ್ಲದೆ ಬೇರೆ ಬೇರೆ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇತ್ತು. ಆಗ ಬಸ್ಸು, ಸೈಕಲ್, ಬೈಕ್‌ಗಳ ವ್ಯವಸ್ಥೆ ಇಲ್ಲದೆ ಬಡತನದಲ್ಲಿ ಓದಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು. ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಪ್ರತಿಯೊಂದು ಹಳ್ಳಿಗಳಲ್ಲೂ ಇವೆ. ಎಲ್ಲಾ ಮಕ್ಕಳು ಓದಿ ವಿದ್ಯಾವಂತರಾಗಿ ದೇಶದ ಪ್ರಗತಿಯನ್ನು ಕಾಣಬೇಕು. ನನ್ನ ಶಾಲೆ ಮಕ್ಕಳು ವಿದ್ಯಾಭ್ಯಾಸ ಮಾಡಿ ಹೆಚ್ಚಿನ ರೀತಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದೇನೆ. ನನ್ನ ಆಸೆಯಿಂದ ಪ್ರತಿ ವರ್ಷವೂ ಈ ಶಾಲೆಯ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಬೇಲೂರು ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ ಮಾತನಾಡಿ, ‘ಸರ್ಕಾರಿ ಶಾಲೆಯ ಮತ್ತು ಖಾಸಗಿ ಶಾಲೆಯ ವ್ಯತ್ಯಾಸವೆಂದರೆ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯು ತನ್ನದೇ ಆದ ಬದುಕನ್ನು ರೂಪಿಸಿಕೊಂಡು ತನ್ನ ಜೀವನದ ಸಿದ್ದತೆ ಮಾಡಿಕೊಳ್ಳತ್ತಾನೆ. ಅದೇ ಖಾಸಗಿ ಶಾಲೆಯ ವಿದ್ಯಾರ್ಥಿ ಶಿಕ್ಷಕರು ಹೇಳಿದ ಗುರಿಯ ಮುಖಾಂತರ ವಿದ್ಯಾಭ್ಯಾಸ ಕಲಿತು ಒಂದು ಹಾದಿಯಲ್ಲಿ ಹೋಗುತ್ತಾನೆ. ಆ ವ್ಯಕ್ತಿಗೆ ಜೀವನದ ಬಗ್ಗೆ ಅನುಭವ ಇಲ್ಲದೆ ಜೀವನದಲ್ಲಿ ಅವನಿಗೆ ಹೊರಗಿನ ಪ್ರಪಂಚದ ಜ್ಞಾನವು ಕಡಿಮೆ ಇರುತ್ತದೆ. ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ಹಲವು ಕೊರತೆಗಳು ಎದ್ದು ಕಾಣುತ್ತಿದೆ. ಉದಾರಣೆಗೆ ಬೇಲೂರು ತಾಲೂಕಿನಲ್ಲಿ ೨೫೯ ಶಾಲೆ ಇದ್ದು ಅದರಲ್ಲಿ ೧೧೧ ಹಿರಿಯ ಪ್ರಾಥಮಿಕ ಪಾಠಶಾಲೆ, ೧೪೮ ಕಿರಿಯ ಪ್ರಾಥಮಿಕ ಪಾಠಶಾಲೆ ಇದೆ, ಅದರಲ್ಲಿ ನಮ್ಮ ವ್ಯಾಪ್ತಿಯಲ್ಲಿ ೭೪೫ ಶಿಕ್ಷಕ ಹುದ್ದೆಯಿದ್ದು, ಅದರಲ್ಲಿ ೬೧೫ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ೧೦೦ ಶಿಕ್ಷಕರ ಕೊರತೆಯಿದೆ’ ಎಂದು ಹೇಳಿದರು.

ನಿವೃತ ಶಿಕ್ಷಕಿ ಸಾವಿತ್ರಬಾಯಿ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಓದುವ ಕಡೆ ಗಮನ ಹರಿಸಿ, ಇಂದಿನ ಮೊಬೈಲ್‌ಗಳ ಬಗ್ಗೆ ವ್ಯಾಮೋಹ ಕಡಿಮೆ ಮಾಡಿದರೆ ಜೀವನದಲ್ಲಿ ಮುಂದೆ ಬರಬಹುದು. ದೊಡ್ಡವರು ಮಾತನ್ನು ಕೇಳಿ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ಬೆಳೆಸಿಕೊಂಡು ಜೀವದಲ್ಲಿ ಒಳ್ಳೆಯ ಮಾರ್ಗದಲ್ಲಿ ಬೆಳೆಯಿರಿ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯ ಬಿ.ಆರ್.ಪಿ ಮೋಹನ್ ರಾಜ್, ಇ.ಸಿ.ಒ ಉಮೇಶ್, ಸಿ.ಆರ್.ಪಿ ವಿಜಯ್, ಪ್ರಭಾರಿಯ ಮುಖ್ಯ ಶಿಕ್ಷಕ ಮಂಜಪ್ಪ, ಶಿಕ್ಷಕ ಚಂದ್ರಶೇಖರ್‌, ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯ ಗೋವಿಂದ ನಾಯಕ್, ಗ್ರಾಮಸ್ಥರು, ಮಕ್ಕಳು ಹಾಜರಿದ್ದರು.