ಶಿಕ್ಷಣಕ್ಕೆ ನೀಡದಷ್ಟೇ ಆದ್ಯತೆ ಕ್ರೀಡೆಗೂ ನೀಡಿ

| Published : Dec 14 2024, 12:45 AM IST

ಶಿಕ್ಷಣಕ್ಕೆ ನೀಡದಷ್ಟೇ ಆದ್ಯತೆ ಕ್ರೀಡೆಗೂ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಬದುಕಲು ವಿದ್ಯೆ ಮತ್ತು ಕ್ರೀಡೆ ಎರಡನ್ನು ಸಮವಾಗಿ ಕಲಿತು ಪೋಷಕರು, ಗುರುಗಳಿಗೆ ಹಾಗೂ ದೇಶಕ್ಕೆ ಹೆಮ್ಮೆ ತರಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ. ಕ್ರೀಡೆ ಅಥವಾ ಜೀವನದಲ್ಲಿ ಸೋತವರು ಸೋಲುತ್ತಲೇ ಇರಬೇಡಿ ಗೆಲ್ಲಲು ಪ್ರಯತ್ನಿಸಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಧರ್ಮ ಸಾಧನೆ ಮಾಡಲು, ಸಮಾಜಕ್ಕೆ ಉತ್ತಮ ಕೆಲಸ ಮಾಡಲು ಶರೀರ ಮುಖ್ಯ.ಅಂತಹ ಶರೀರ ಕಾಪಾಡಲು ಮತ್ತು ಮನೊರಂಜನೆ ನೀಡಲು ಕ್ರೀಡೆ ಮುಖ್ಯ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸ್ಟೇಡಿಯಂನಲ್ಲಿ ಶುಕ್ರವಾರ ಆಯೋಜಿಸಿದ್ದ 27ನೇ ರಾಜ್ಯ ಮಟ್ಟದ ಕ್ರೀಡಾಕೂಟ-2024ರ ಚುಂಚಾದ್ರಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

ಎಲ್ಲರೂ ಸಹಜವಾಗಿ ತಮ್ಮ ತಮ್ಮ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನಲ್ಲಿ ಒತ್ತಡಕ್ಕೆ ಸಿಲುಕಿರುತ್ತೇವೆ. ಒತ್ತಡ ಕಡಿಮೆ ಮಾಡಿ ಕೊಳ್ಳಲು ಕ್ರೀಡೆ ಬಹು ಮುಖ್ಯ, ಕ್ರೀಡೆಯಿಂದ ಶರೀರ ಮತ್ತು ಮನಸ್ಸು ಗಟ್ಟಿಗೊಳ್ಳುತ್ತದೆ. ಸಮಾಜದಲ್ಲಿ ನಾವು ಗೌರವಯುತವಾಗಿ ಬದುಕಲು ವಿದ್ಯೆ ಮತ್ತು ಕ್ರೀಡೆಗಳು ಅನುವು ಮಾಡಿ ಕೊಡುತ್ತವೆ. ಅಕಸ್ಮಾತ್ ವಿದ್ಯೆ ಹತ್ತದಿದ್ದರೂ ಕ್ರೀಡೆ ಕೈ ಹಿಡಿಯುತ್ತದೆ ಎಂಬುದಕ್ಕೆ ಎಷ್ಟೋ ಮಂದಿ ಕ್ರೀಡಾ ಪಟುಗಳು ವಿದ್ಯೆಯಿಂದಲ್ಲದೆ ಕ್ರೀಡೆಯಿಂದಲೆ ಪ್ರವರ್ಧಮಾನಕ್ಕೆ ಬಂದಿರುವ ಉದಾಹರಣೆಗಳಿವೆ ಎಂದರು.

ವಿದ್ಯಾರ್ಥಿಗಳು ಬದುಕಲು ವಿದ್ಯೆ ಮತ್ತು ಕ್ರೀಡೆ ಎರಡನ್ನು ಸಮವಾಗಿ ಕಲಿತು ಪೋಷಕರು, ಗುರುಗಳಿಗೆ ಹಾಗೂ ದೇಶಕ್ಕೆ ಹೆಮ್ಮೆ ತರಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ. ಕ್ರೀಡೆ ಅಥವಾ ಜೀವನದಲ್ಲಿ ಸೋತವರು ಸೋಲುತ್ತಲೇ ಇರಬೇಡಿ ಗೆಲ್ಲಲು ಪ್ರಯತ್ನಿಸಿ ಸೋಲೆ ಗೆಲುವಿನ ಸೋಪಾನ ಎಂದು ಹೇಳಿದರು.

ಕ್ರೀಡೆಯಿಂದ ಸಾಮರಸ್ಯ

ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ವಿ.ಗೋಪಾಲಗೌಡ ಮಾತನಾಡಿ, ಶಾಲಾ ಕಾಲೇಜು ದಿನಗಳಲ್ಲಿ ದೈಹಿಕ ದೃಢತೆಗೆ ಆದ್ಯತೆ ಕೊಡುವ ನಾವು ನಂತರ ಉದಾಸೀನತೆಯಿಂದ ಕೆಲಸದ ಒತ್ತಡದಲ್ಲಿ ಮರೆಯುತ್ತೇವೆ. ದೈಹಿಕ ಮತ್ತು ಮಾಸಿಕ ದೃಡತೆಗೆ ಕ್ರೀಡೆ ವ್ಯಾಯಾಮ ಮನುಷ್ಯನಿಗೆ ಅಗತ್ಯವಿದೆ. ಮಾನಸಿಕ ದೃಢತೆಯಿಂದ ಪರಸ್ಪರ ಹೊಂದಾಣಿಕೆ ಸಾಮರಸ್ಯ ಏರ್ಪಟ್ಟು, ಯಾವುದೇ ತಂಡವಾಗಿ ಆಡುವ ಕ್ರೀಡೆಯಲ್ಲಿ ಗೆಲುವು ಸಾದ್ಯವಾಗುತ್ತದೆ ಎಂದರು.

ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಬೇಕು. ಹಾಗೇಯೇ ಜೀವನದಲ್ಲಿ ಸೋತಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಒಳಗಾಗಬೈರದು. ಈ ಸಮಾರಂಭವು ರಾಷ್ಟ್ರ ಮಟ್ಟದಲ್ಲಿ ನಡೆಯಬೇಕಾದ ಸಮಾರಂಭ. ಇಲ್ಲಿ ನೆರೆದಿರುವ ಮಕ್ಕಳು ಮುಂದೆ ಈ ದೇಶದ ಜವಾಬ್ದಾರಿಯುತ ನಾಗರೀಕರಾಗಿ ಹಾಗೂ ದೇಶ ಸೇವೆಗಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಹೇಳಿದರು. 27 ನೇ ಕ್ರೀಡೋತ್ಸವ

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಚುಂಚಾದ್ರಿ ಕ್ರೀಡೋತ್ಸವವು 1994ರಲ್ಲಿ ಪರಮಪೂಜ್ಯ ಜಗದ್ಗುರು ಡಾ. ಬಾಲಗಂಗಾಧರನಾಥ ಮಾಹಾಸ್ವಾಮೀಜಿಯವರ ದಿವ್ಯ ದೃಷ್ಟಿಯಿಂದ ಪ್ರಾರಂಭವಾಯಿತು. 27 ವರ್ಷಗಳಿಂದ ಇದನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಿಚಿಗನ್ ಬೋರ್ಡ್‌ನ ಮೊದಲನೇ ಅಂತರಾಷ್ಟ್ರೀಯ ವಕೀಲ ಹಾಗೂ ಯುಎಸ್‌ಎಯ ಅಕ್ಕ ಸಮ್ಮೇಳನದ ಅಧ್ಯಕ್ಷ ಅಮರನಾಥಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಮ್.ಎ ಶೇಖರ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಅಂತಾರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಉಷಾರಾಣಿ, ನ್ಯೂಸ್ ಫಸ್ಟ್ ಸಿಇಓ ಎಸ್. ರವಿಕುಮಾರ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ನಿರ್ವಾಹಣಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ, ಪ್ರಾಂಶುಪಾಲ ಡಾ. ಜಿ. ಟಿ ರಾಜು, ಕುಲಸಚಿವ ಜೆ.ಸುರೇಶ.ಶಾಖಾ ಮಠದ ಕಾರ್ಯದರ್ಶೀ ಮಂಗಳಾನಾಥ ಸ್ವಾಮೀಜಿ ಇದ್ದರು.