ಸಾರಾಂಶ
ಉಚಿತ ಮನೆ ಒದಗಿಸಿ, ಬಿಪಿಎಲ್ ಕಾರ್ಡ್ ಒದಗಿಸಬೇಕು. ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡಿ ಶೇ. ೭೫ ಸಹಾಯಧನ ಹಾಗೂ ಉಳಿದ ಶೇ.೨೫ಕ್ಕೆ ೫ ವರ್ಷ ಬಡ್ಡಿ ರಹಿತ ₹೫ ಲಕ್ಷ ಸಾಲ ಒದಗಿಸಬೇಕು
ಸಂಡೂರು: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಕೇಂದ್ರದ ಆವರಣದಲ್ಲಿ ಗುರುವಾರ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದಿಂದ ಒಂಟಿ ಮಹಿಳೆಯರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಒಂಟಿ ಮಹಿಳೆಯರಿದ್ದು, ಅವರನ್ನು ಸರ್ವೇ ಮಾಡಬೇಕು. ಗಂಡ ಬಿಟ್ಟ ಅಥವಾ ಗಂಡ ಸತ್ತ ಮೇಲೆ ಒಂಟಿಯಾಗುವ ಮಹಿಳೆಯರ ಮದುವೆಗೆ ₹ ೫ ಲಕ್ಷ ಪ್ರೋತ್ಸಾಹ ಧನ ಘೋಷಿಸಬೇಕು. ವಿದ್ಯಾವಂತ ಮಹಿಳೆಯರಿಗೆ ಉದ್ಯೋಗ ಕಲ್ಪಿಸಬೇಕು. ಇಲ್ಲವೇ ನಿರುದ್ಯೋಗ ಭತ್ಯೆಯಾಗಿ ಮಾಸಿಕ ಹತ್ತು ಸಾವಿರ ಹಣ ನೀಡಬೇಕು. ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಟ ೧೮ ತಿಂಗಳು ಮಾಸಿಕ ಹತ್ತು ಸಾವಿರ ನೆರವು, ವೈದ್ಯಕೀಯ ರಕ್ಷಣೆ ಒದಗಿಸಬೇಕು. ಒಂಟಿ ಮಹಿಳೆಯರ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು.ಉಚಿತ ಮನೆ ಒದಗಿಸಿ, ಬಿಪಿಎಲ್ ಕಾರ್ಡ್ ಒದಗಿಸಬೇಕು. ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡಿ ಶೇ. ೭೫ ಸಹಾಯಧನ ಹಾಗೂ ಉಳಿದ ಶೇ.೨೫ಕ್ಕೆ ೫ ವರ್ಷ ಬಡ್ಡಿ ರಹಿತ ₹೫ ಲಕ್ಷ ಸಾಲ ಒದಗಿಸಬೇಕು. ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಯಲ್ಲಿ ಒಂಟಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಮುಂತಾದ ಹಕ್ಕೊತ್ತಾಯವನ್ನು ಸಮಾವೇಶದಲ್ಲಿ ಮಂಡಿಸಲಾಯಿತು.
ಸಂಘಟನೆಯ ರಾಜ್ಯ ಮುಖಂಡ ಯು.ಬಸವರಾಜ, ಬಿ. ಮಾಳಮ್ಮ ಒಂಟಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು.ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ:
ಸುನಿತಾ (ಅಧ್ಯಕ್ಷೆ), ಹುಲಿಗೆಮ್ಮ (ಉಪಾಧ್ಯಕ್ಷೆ), ಮಾಯಮ್ಮ(ಕಾರ್ಯದರ್ಶಿ), ಹುಲಿಗೆಮ್ಮ (ಸಹ ಕಾರ್ಯದರ್ಶಿ), ಎ.ಸ್ವಾಮಿ (ಗೌರವಾಧ್ಯಕ್ಷ) ಹಾಗೂ ಎಚ್.ದುರುಗಮ್ಮ (ಖಜಾಂಚಿ) ಸಮಾವೇಶದಲ್ಲಿ ಸಂಘದ ಸಂಚಾಲಕ ಎಚ್.ದುರುಗಮ್ಮ, ಸಹ ಸಂಚಾಲಕ ಎ.ಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಪಂಪನಗೌಡ, ಎನ್. ಸುಂಕಣ್ಣ, ವಿ. ದೇವಣ್ಣ, ದೇವದಾಸಿ ಮಹಿಳಾ ವಿಮೋಚನಾ ಸಂಘದ ತಾಲೂಕಾಧ್ಯಕ್ಷೆ ಮಾರೆಮ್ಮ, ಮುಖಂಡರಾದ ಸುನಿತಾ, ಮಂಜುಳಾ, ನಿಂಗಮ್ಮ, ಮಾರಮ್ಮ, ತಿಪ್ಪಮ್ಮ, ಹನುಮಕ್ಕ, ತಾಯಮ್ಮ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.