ಮಾಹಿತಿ ಹಕ್ಕು ಕಾಯ್ದೆ 2005ರ 6 (3) ಅಡಿ ಯಾವುದೇ ಒಂದು ನಿರ್ದಿಷ್ಟ ಶಾಲೆ ಅಥವಾ ಕಚೇರಿಗೆ ಸಂಬಂಧಿಸಿದ್ದರೆ ಮಾತ್ರ ವರ್ಗಾವಣೆ ಮಾಡಲು ಬರುತ್ತದೆ.

ಯಲಬುರ್ಗಾ: ಆರ್‌ಟಿಐ ೨೦೦೫ರ ಅಡಿಯಲ್ಲಿ ಕಚೇರಿ ಅಧೀನದಲ್ಲಿ ಬರುವ ಕಿರಿಯ,ಹಿರಿಯ ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಶಾಲೆಗಳ ಮಾಹಿತಿ ನೀಡುವಂತೆ ಕಚೇರಿಗೆ ಬರುವ ಅರ್ಜಿಗಳಿಗೆ ಸೂಕ್ತ ಹಿಂಬರಹ ನೀಡುವ ಅಥವಾ ಒಂದು ಶಾಲೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಬಿಇಒ ಶ್ರೀನಿವಾಸ ಜಿ.ಬನ್ನಿಗೋಳಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವಿ. ಧರಣಾ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಕಚೇರಿಗೆ ಸಲ್ಲಿಸಿರುವ ಅರ್ಜಿಗಳಿಗೆ ಕಚೇರಿ ಅಧೀನದಲ್ಲಿ ಬರುವ ಎಲ್ಲ ಶಾಲೆಗಳಿಗೆ ಮಾಹಿತಿ ನೀಡುವಂತೆ ಉಲ್ಲೇಖದ ಜ್ಞಾಪನದಲ್ಲಿ ಸೂಚಿಸಲಾಗಿದೆ. ಪ್ರತಿಯೊಂದು ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪ್ರತ್ಯೇಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹೊಂದಿರುವುದರಿಂದ ಅರ್ಜಿದಾರರು ಸಂಬಂಧಿಸಿದ ಶಾಲೆ ಅಥವಾ ಸಂಸ್ಥೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ. ಅರ್ಜಿದಾರರು ಕಚೇರಿಗೆ ಅರ್ಜಿ ಸಲ್ಲಿಸಿ, ಅಧೀನದ ಎಲ್ಲ ಶಾಲೆಗಳ ಮಾಹಿತಿ ಒದಗಿಸಲು ಕೋರಿದ್ದು ಅಥವಾ ಕೋರಿದಾಗ ಪ್ರತಿಯೊಂದು ಶಾಲೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹೊಂದಿರುವುದರಿಂದ ಸಂಬಂಧಿಸಿದ ಶಾಲೆ ಅಥವಾ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವಂತೆ ಸೂಕ್ತ ಹಿಂಬರಹ ನೀಡಬಹುದಾಗಿದೆ.

ಮಾಹಿತಿ ಹಕ್ಕು ಕಾಯ್ದೆ 2005ರ 6 (3) ಅಡಿ ಯಾವುದೇ ಒಂದು ನಿರ್ದಿಷ್ಟ ಶಾಲೆ ಅಥವಾ ಕಚೇರಿಗೆ ಸಂಬಂಧಿಸಿದ್ದರೆ ಮಾತ್ರ ವರ್ಗಾವಣೆ ಮಾಡಲು ಬರುತ್ತದೆ. ಈ ಕುರಿತು ತಜ್ಞರನ್ನು ವಿಚಾರಿಸಿದಾಗ ಈ ರೀತಿ ಅರ್ಜಿ ಬಂದಾಗ ಒಂದು ಶಾಲೆ ಅಥವಾ ಸಂಸ್ಥೆಗೆ ವರ್ಗಾವಣೆ ಮಾಡಬಹುದಾಗಿದೆ ಎಂದು ಮಾಹಿತಿ ಆಯೋಗವು ಹಲವಾರು ಪ್ರಕರಣಗಳಲ್ಲಿ ಸೂಚಿಸಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಪ್ರಕರಣ ಮಾಹಿತಿ ಆಯೋಗದಲ್ಲಿ ಇರುವುದರಿಂದ ಮೇಲ್ಕಂಡ ಎಲ್ಲ ಅಂಶ ಆಯೋಗಕ್ಕೆ ಮನವರಿಕೆ ಮಾಡಿಕೊಡಬೇಕೆಂದು ತಾಲೂಕಿನ ಕಿರಿಯ, ಹಿರಿಯ, ಪ್ರಾಥಮಿಕ, ಪ್ರೌಢ ಅನುದಾನಿತ ಶಾಲೆಗಳ ಪರವಾಗಿ ಒತ್ತಾಯಿಸಿದರು.

ಈ ಸಂದರ್ಭ ಸಂಘದ ಕುಕನೂರು ತಾಲೂಕಾಧ್ಯಕ್ಷ ಮಹೇಶ ಸಬರದ, ಪದಾಧಿಕಾರಿ ಬಸವರಾಜ ಮುಳಗುಂದ, ನಾಗರಾಜ ನಡುಲಕೇರಿ, ಕಳಕಮಲ್ಲಪ್ಪ ಅಂತೂರ, ಶರಣಯ್ಯ ಸರಗಣಾಚಾರ್, ಪ್ರಭು ಶಿವನಗೌಡ್ರ, ಮೆಹಬೂಬ ಬಾದಶ, ಮಾರುತಿ ಹಾದಿಮನಿ, ಶ್ರೀಶೈಲ ಅರಕಲ್, ಮಲ್ಲಪ್ಪ ಪಟ್ಟೇದ, ಶಂಭುಲಿಂಗಪ್ಪ, ಗಿರಿಜಾ ಧರ್ಮಸಾಗರ, ಧರ್ಮಣ್ಣ ಬಿಂಗಿ, ಆಂಜನೇಯ ಈಳಿಗೇರ್, ಮುರ್ತುಜಾಸಾಬ್ ಮುಜಾವರ, ಬಸವರಾಜ, ಸುರೇಶ ಅಬ್ಬಿಗೇರಿ, ಸೇರಿದಂತೆ ಮತ್ತಿತರರು ಇದ್ದರು.