ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಾರ್ವಜನಿಕರು ತಮ್ಮ ಎಲ್ಲಾ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತಗೊಳಿಸಲು ಈ ಹಿಂದೆ ಎಷ್ಟೇ ಬಾರಿ ಮಕ್ಕಳಿಗೆ ಲಸಿಕೆ ಹಾಕಿಸಿದರೂ ಇಂದು ಕೂಡ ಲಸಿಕೆ ಹಾಕಿಸಬೇಕು ಎಂದರು.
ತಾಲೂಕಿನ ಎಲ್ಲಾ ತಮ್ಮ ಗ್ರಾಮಗಳ ಲಸಿಕಾ ಕೇಂದ್ರಗಳ ಬಳಿ ತೆರಳಿ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಭಾರತ ಪೋಲಿಯೋ ಮುಕ್ತ ದೇಶವಾಗಿಸಲು ಪೋಷಕರ ಜವಾಬ್ದಾರಿಯಾಗಿದೆ ಎಂದರು.ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿ, ತಾಲೂಕಿನಲ್ಲಿ 69 ಕೇಂದ್ರಗಳನ್ನು ತೆರೆದು 11,500 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ 11, 213 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಉಳಿದವುಗಳನ್ನು ಇನ್ನೆರಡು ದಿನದಲ್ಲಿ ಪೂರ್ಣಗೊಳಿಸಲಾಗುತ್ತದೆ. ವಲಸೆ ಜನಾಂಗದ ಮಕ್ಕಳಿಗೂ ಕೂಡ ಲಸಿಕೆ ಹಾಕಿಸುವ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ಆಶಾಲತಾ, ಕಾಂಗ್ರೆಸ್ ಜಿಲ್ಲಾ ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ, ಪುರಸಭಾ ಮಾಜಿ ಸದಸ್ಯ ಎಂ.ಕೃಷ್ಣಪ್ಪ, ಆಶಾಲತಾ ಪುಟ್ಟೇಗೌಡ, ಮುಖಂಡರಾದ ಎಲ್.ನಾಗರಾಜು, ಲೋಕೇಶ್, ಸೋಮು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳಾ, ಸೇರಿದಂತೆ ಆಸ್ಪತ್ರೆ ವೈದ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಪಲ್ಸ್ ಪೋಲೀಯೊ ಹಾಕಿಸಿ ಅಂಗವಿಕಲತೆ ತೊಲಗಿಸಿ: ಕೆ.ಎಂ.ನಂದೀಶ್
ಹಲಗೂರುಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸಿ ಯಾವುದೇ ಅಂಗವಿಕಲತೆ ಆಗದಂತೆ ತಡೆಯುವಂತೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಂ.ನಂದೀಶ್ ತಿಳಿಸಿದರು.ಹಲಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಬೆಳಗ್ಗೆಯಿಂದ ಸಂಜೆವರೆಗೆ 850ಕ್ಕೂ ಹೆಚ್ಚು ಮಕ್ಕಳಿಗೆ ಹಾಕಲಾಗಿದೆ. ಸೋಮವಾರ ಮತ್ತು ಮಂಗಳವಾರ ಮನೆಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ ಎಂದರು.ಶನಿವಾರ ಶಾಲಾ ವಿದ್ಯಾರ್ಥಿಗಳಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಮುತ್ತತ್ತಿ ರಸ್ತೆಯ ಗಣಪತಿ ದೇವಸ್ಥಾನ, ಸಾರಿಗೆ ಬಸ್ ನಿಲ್ದಾಣ, ಕೊನ್ನಾಪುರದ ಸರ್ಕಾರಿ ಪ್ರಾಥಮಿಕ ಶಾಲೆ, ಮಾರಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೊರೆ ಕಾಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದರು.
ಈ ವೇಳೆ ಗೀತಾ, ಶಿವಕುಮಾರ, ಸುನಿಲ್ ಕುಮಾರ್, ಶ್ವೇತ, ಮಹೇಶ್ ಸೇರಿದಂತೆ ಇತರರು ಇದ್ದರು.