ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಗುಣಾತ್ಮಕ ಶಿಕ್ಷಣ ನೀಡಿ: ಮಂಜುನಾಥ ಸ್ವಾಮಿ

| Published : Feb 19 2024, 01:31 AM IST

ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಗುಣಾತ್ಮಕ ಶಿಕ್ಷಣ ನೀಡಿ: ಮಂಜುನಾಥ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಗುಣಾತ್ಮಕ, ಮೂಲಭೂತ ಶಿಕ್ಷಣ ಕೊಡುವಲ್ಲಿ ನಾವು ಇನ್ನೂ ವಿಫಲರಾಗಿದ್ದೇವೆ. ವಸ್ತು ಪ್ರದರ್ಶನಗಳಲ್ಲಿ ಮಗುವಿಗೆ ಚಟುವಟಿಕೆಗಳ ಕೊಟ್ಟರೆ, ಅದನ್ನು ಅವರ ಅಪ್ಪ, ಅಮ್ಮಂದಿರು ಮಾಡಿ ಕಳಿಸುತ್ತಾರೆ. ಹೀಗಾದರೆ ಮಕ್ಕಳು ಅಭ್ಯಾಸ ಮಾಡುವುದು ಯಾವಾಗ ಎಂದು ಪ್ರಶ್ನಿಸಿದರು. ಆದ್ದರಿಂದ ಶಿಕ್ಷಕರು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದಲೇ ಚಟುವಟಿಕೆಗಳ ಮಾಡಿಸುವಂತೆ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ವರ್ಷದಿಂದ ಜಾರಿಗೆ ತಂದಿರುವ ಪಬ್ಲಿಕ್ ಪರೀಕ್ಷೆ ಬಗ್ಗೆ ಯಾರಿಗೂ ಭಯಬೇಡ, ಅದು ಪಬ್ಲಿಕ್ ಪರೀಕ್ಷೆಯಲ್ಲ, ಬದಲಾಗಿ ಮೌಲ್ಯಾಂಕನವೆಂದು ಕರೆಯಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಮಂಜುನಾಥ ಸ್ವಾಮಿ ಹೇಳಿದರು.

ರಾಜ್ಯ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹೊನ್ನಾಳಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ 5, 8 ಮತ್ತು 9 ನೇ ತರಗತಿ ಪಬ್ಲಿಕ್ ಪರೀಕ್ಷೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ತರಬೇತಿ ಕೊಡುವುದು ಕಡಿಮೆ. ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಎಂದು ಹೇಳಿ ಭಯಪಡಿಸುವ ಬದಲು, ಅವರ ಕಲಿಕೆ ಮೌಲ್ಯಾಂಕನಕ್ಕೆ ಒಳಪಡಿಸಬೇಕಾದ ವ್ಯವಸ್ಥೆಯಾಗಿದೆ ಎಂದರು.

ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಗುಣಾತ್ಮಕ, ಮೂಲಭೂತ ಶಿಕ್ಷಣ ಕೊಡುವಲ್ಲಿ ನಾವು ಇನ್ನೂ ವಿಫಲರಾಗಿದ್ದೇವೆ. ವಸ್ತು ಪ್ರದರ್ಶನಗಳಲ್ಲಿ ಮಗುವಿಗೆ ಚಟುವಟಿಕೆಗಳ ಕೊಟ್ಟರೆ, ಅದನ್ನು ಅವರ ಅಪ್ಪ, ಅಮ್ಮಂದಿರು ಮಾಡಿ ಕಳಿಸುತ್ತಾರೆ. ಹೀಗಾದರೆ ಮಕ್ಕಳು ಅಭ್ಯಾಸ ಮಾಡುವುದು ಯಾವಾಗ ಎಂದು ಪ್ರಶ್ನಿಸಿದರು. ಆದ್ದರಿಂದ ಶಿಕ್ಷಕರು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದಲೇ ಚಟುವಟಿಕೆಗಳ ಮಾಡಿಸುವಂತೆ ಕ್ರಮ ವಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ನಂಜರಾಜ್ ಮಾತನಾಡಿ, ಖಾಸಗಿ ಶಾಲೆಗಳಲ್ಲೂ ಪ್ರತಿಭಾನ್ವಿತ ಶಿಕ್ಷಕರಿದ್ದು, ಮಕ್ಕಳ ಉತ್ತಮ ಕಲಿಕೆಯತ್ತ ಪ್ರೇರೆಪಿಸುವ ಕೆಲಸ ಮಾಡುತ್ತಿದ್ದಾರೆ. ಮೌಲ್ಯಾಂಕನ ವಿಷಯದಲ್ಲಿ ತರಬೇತಿ ಕೊರತೆಯಿಂದ ಅವರು ಹಿಂದೆ ಬೀಳುವ ಅವಶ್ಯಕತೆ ಇಲ್ಲ, ಈ ಒಂದು ದಿನದ ತರಬೇತಿ ಕಾರ್ಯಾಗಾರದಿಂ ಹೆಚ್ಚಿನ ಮಾಹಿತಿ ನೀಡಲಿದೆ ಎಂದರು. ಪರೀಕ್ಷೆಗೆ ಇನ್ನೂ 20 ದಿನಗಳಿದ್ದು ,ಮಕ್ಕಳನ್ನು ತಯಾರು ಮಾಡುವ ಮೂಲಕ ಹೆಚ್ಚಿನ ಜ್ಞಾನ ನೀಡಿ ಮೌಲ್ಯಾಂಕನಕ್ಕೆ ಸಜ್ಜುಗೊಳಿಸಲಿ ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅನುದಾನ ರಹಿತ ಶಾಲೆಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಆದರೂ ಖಾಸಗಿ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆದ್ದರಿಂದ ಸರ್ಕಾರ ಖಾಸಗಿ ಶಾಲಾ ಶಿಕ್ಷಕರಿಗೆ ತರಬೇತಿ ಕೊಟ್ಟರೆ ಇನ್ನೂ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು.

ಬಿಆರ್ ಸಿ ತಿಪ್ಪೇಶಪ್ಪ, ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿದರು. ಕನ್ನಡ ವಿಷಯವಾರು ಕುರಿತು ಶಿವಪ್ರಸಾದ್, ಪರಿಸರ ಕುರಿತು ಸುಧಾಶಿವು, ಆಂಗ್ಲ ವಿಷಯವಾಗಿ ಹೊನ್ನೇಶ್, ಗಣಿತ ವಿಷಯವಾಗಿ ಪ್ರಶಾಂತ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮೌಲ್ಯಾಂಕನ ಕುರಿತು ತರಬೇತಿ ನೀಡಿದರು.

ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಎನ್.ಕೆ. ಆಂಜನೇಯ, ಕೆ. ಪುಟ್ಟಪ್ಪ, ನಿರ್ದೇಶಕರಾದ ರಾಜು ಕಡಗಣ್ಣಾರ್, ಎಂ.ಬಿ. ಸುರೇಶ್, ಖಜಾಂಚಿ ಯೋಗೇಶ್ವರಪ್ಪ, ಎಂ.ಐ. ದೇವರಾಜ್, ಡಿ.ಎ. ಚಂದನ, ಕಾರ್ಯದರ್ಶಿ ಬಿ. ವರುಣಾಚಾರಿ ಉಪಸ್ಥಿತರಿದ್ದರು. 300 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.