ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ

| Published : Apr 21 2024, 02:23 AM IST

ಸಾರಾಂಶ

ರಾಮನಗರ: ಹುಬ್ಬಳಿಯ ಯುವತಿ ನೇಹಾ ಹಿರೇಮಠ್ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಹುಬ್ಬಳಿಯ ಯುವತಿ ನೇಹಾ ಹಿರೇಮಠ್ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನೇಹಾ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದ್ದಾರೆ.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿಕೆಗಳು ಸಾಕ್ಷಿ ಎಂದು ಟೀಕಿಸಿದರು.

ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಮಾತನಾಡಿ, ನೇಹ ಕೊಲೆ ಪ್ರಕರಣದ ದಿಕ್ಕ ತಪ್ಪಿಸುವ ಹೇಳಿಕೆಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿ ರಾಜ್ಯದ ಗೃಹ ಸಚಿವರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಭಾಗ್ಯಗಳನ್ನು ಕೊಟ್ಟಿದೆ. ಆದರೆ, ಮಹಿಳೆಯರ ಪ್ರಾಣ ರಕ್ಷಣೆಯ ಗ್ಯಾರಂಟಿ ಇಲ್ಲಂದಂತಾಗಿದೆ. ನೇಹಾಳ ಕೊಲೆ ಆರೋಪಿ ಒಬ್ಬ ಅಲ್ಪಸಂಖ್ಯಾತ ಸಮುದಾಯದವನು. ಹೀಗಾಗಿ ಆ ಸಮುದಾಯವನ್ನು ಓಲೈಸಲು ಗೃಹ ಸಚಿವರು, ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಕೊಲೆಯಾದ ನೇಹಾ ತಂದೆ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್. ಆದರೆ ಅವರ ಮಗಳ ಕೊಲೆಗೆ ಕಾಂಗ್ರೆಸ್ ಸರ್ಕಾರದಿಂದಲೇ ನ್ಯಾಯ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ದರ್ಶನ್, ಪ್ರಧಾನ ಕಾರ್ಯದರ್ಶಿ ಸಂಜಯ್, ಕಾರ್ಯದರ್ಶಿ ರಮೇಶ್,ಎಸ್ .ಆರ್.ನಾಗರಾಜ್, ಮೈತ್ರಿ ಪಕ್ಷಗಳ ಕಾರ್ಯಕರ್ತರಾದ ಜೆ.ಮುಕುಂದರಾಜ್, ಪಿ.ಶಿವಾನಂದ, ಬಿ.ನಾಗೇಶ್, ಜಯಕುಮಾರ್, ಕೆಂಪರಾಜು, ಮಂಜು, ರಾಮಾಂಜನಿ, ಕೃಷ್ಣ ಮತ್ತಿತರರಿದ್ದರು.20ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.