ಹಸುವಿನ ಕೆಚ್ಚಲು ಕೊಯ್ದವನಿಗೆ ಕಠಿಣ ಶಿಕ್ಷೆ ವಿಧಿಸಿ

| Published : Jan 16 2025, 12:46 AM IST

ಹಸುವಿನ ಕೆಚ್ಚಲು ಕೊಯ್ದವನಿಗೆ ಕಠಿಣ ಶಿಕ್ಷೆ ವಿಧಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಿನ ಮೇಲೆ ಪೈಶಾಚಿಕ ಕೃತ್ಯ ನಡೆಸಿರುವ ಮತಾಂಧರಿಗೆ ಸರ್ಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಈ ಶಿಕ್ಷೆ ನೋಡಿದರೆ ಇನ್ಯಾರು ಗೋವುಗಳ ಮೇಲೆ ದೌರ್ಜನ್ಯ ನಡೆಸಲು ಭಯಪಡಬೇಕು.

ಹುಬ್ಬಳ್ಳಿ:

ಚಾಮರಾಜಪೇಟೆಯಲ್ಲಿ ಈಚೆಗೆ ಹಸುವಿನ ಕೆಚ್ಚಲು ಕೊಯ್ದ ಪೈಶಾಚಿಕ ಕೃತ್ಯ ಖಂಡಿಸಿ ಸಮಸ್ತ ಗೋ ಭಕ್ತ ಪರಿವಾರದಿಂದ ಬುಧವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹತ್ತಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡು ಘಟನೆ ಖಂಡಿಸಿದರು.

ಇಲ್ಲಿನ ಮೂರುಸಾವಿರ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ದಾಜೀಬಾನ ಪೇಟೆ, ಜನತಾ ಬಜಾರ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಲಾಯಿತು. ನಂತರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೂರುಸಾವಿರಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀ ಮಾತನಾಡಿ, ಗೋವಿನ ಮೇಲೆ ಪೈಶಾಚಿಕ ಕೃತ್ಯ ನಡೆಸಿರುವ ಮತಾಂಧರಿಗೆ ಸರ್ಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಈ ಶಿಕ್ಷೆ ನೋಡಿದರೆ ಇನ್ಯಾರು ಗೋವುಗಳ ಮೇಲೆ ದೌರ್ಜನ್ಯ ನಡೆಸಲು ಭಯಪಡಬೇಕು ಎಂದರು.

ಗೋವಿನ ಕೆಚ್ಚಲು ಕತ್ತರಿಸುವ ಮೂಲಕ ಮತ್ತೊಂದು ಧರ್ಮದ ಮೇಲೆ ಸೇಡು ತೀರಿಸಿಕೊಳ್ಳುವ ಹೇಯ ಕೃತ್ಯ ಮಾಡಬಾರದು. ಇಂತಹ ಮನೋಭಾವ ಉಳ್ಳವರ ರಕ್ಷಣೆಗೆ ಸರ್ಕಾರ ಮುಂದಾಗದೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಮಾತಾ ಆಶ್ರಮದ ಶ್ರೀ ಮಾತಾ ತೇಜೋಮಯಿ ಮಾತನಾಡಿ, ತಾಯಿ ಎಂದು ಪೂಜಿಸುವ ಗೋವಿನ ಕೆಚ್ಚಲು ಕತ್ತರಿಸುವ ಕೃತ್ಯ ನಡೆದಿರುವುದನ್ನು ಸಹಿಸಿಕೊಳ್ಳಲು ಆಗದು. ಇದರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ ಎಂದರು.

ಕುಂದಗೋಳದ ಬಸವಣ್ಣಜ್ಜನವರು, ಗೋ ಸೇವಾ ಬಳಗದ ಅಧ್ಯಕ್ಷೆ ಭಾರತಿ ಪಾಟೀಲ, ಇಸ್ಕಾನ್‌ನ ರಾಮಗೋಪಾಲ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಕಲಗೌಡ ಪಾಟೀಲ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ನವಲಗುಂದ ಬಸವಲಿಂಗ ಶ್ರೀ, ಡಾ. ವಿ.ಎಸ್.ವಿ. ಪ್ರಸಾದ, ಗೋವರ್ಧನರಾವ್, ಡಾ. ಕ್ರಾಂತಿಕಿರಣ, ಜಯತೀರ್ಥ ಕಟ್ಟಿ, ಸುಭಾಸಸಿಂಗ್ ಜಮಾದಾರ, ಕೃಪಾನಂದ ಸ್ವಾಮೀಜಿ, ಗಂಗಾಧರ ಸಂಗಮಶೆಟ್ಟರ, ವಿಜಯ ಕ್ಷಿರಸಾಗರ, ಸೇರಿದಂತೆ ಹಲವರಿದ್ದರು.