ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರೈತ ಚಳವಳಿಗಳು ರೈತ ವಿರೋಧಿ ಧೋರಣೆ ಕೈ ಬಿಡುವಂತೆ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಬೆಂಬಲ ಬೆಲೆ ಒದಗಿಸುವುದು ಸೇರಿದಂತೆ ಕೃಷಿ ಬಿಕ್ಕಟ್ಟಿಗೆ ಪರಿಹಾರಗಳನ್ನು ಜಾರಿ ಮಾಡುವಂತೆ ನಿರಂತರವಾಗಿ ಆಗ್ರಹಿಸುತ್ತಿದ್ದರೂ ಕಾರ್ಪೊರೇಟ್ ಪರವಾದ ಸರ್ಕಾರಗಳು ನಿರ್ಲಕ್ಷಿಸುತ್ತಾ ಬಂದಿವೆ. ಇದರ ಫಲವಾಗಿ ಕೇವಲ ರೈತರ ಬದುಕು ಮಾತ್ರವೇ ಅಲ್ಲದೇ ಇಡೀ ದೇಶವೇ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜು ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರಾಂತ್ಯ ರೈತ ಸಂಘದ ಸಮಾವೇಶವನ್ನು ಉದ್ಘಾ ಮಾತನಾಡಿ, ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಯಿಂದ ರೈತ ಸಮುದಾಯವನ್ನು ಒಕ್ಕಲೆಬ್ಬಿಸಿ, ಇಡೀ ಕೃಷಿ ರಂಗವನ್ನು ದೈತ್ಯ ಬಹುರಾಷ್ಟ್ರೀಯ ಕಂಪನಿಗಳಿಗೆ ಹಸ್ತಾಂತರಿಸುವ ದುರುದ್ದೇಶದ ಕೃಷಿ ಕಾಯ್ದೆಗಳನ್ನು ಜಾರಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾರ್ಪೊರೇಟೀಕರಣಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಶೇ 90 ರಷ್ಟು ಕೃಷಿ ಮತ್ತು ಕೃಷಿ ಪೂರಕ ವಹಿವಾಟುಗಳ ಮೇಲೆ ಆಧಾರವಾಗಿದೆ. ಇಲ್ಲಿನ ರೈತರು ಪ್ರಮುಖವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಹೈನುಗಾರಿಕೆಯೂ ಈ ಜಿಲ್ಲೆಯಲ್ಲಿ ಪ್ರಮುಖ ಕಸುಬಾಗಿದೆ. ಹೀಗೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ರೈತರ ಜೀವನದಲ್ಲಿ ಒಂದಕ್ಕೊಂದು ಬಲವಾಗಿ ಬೆಸೆದುಕೊಂಡಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣ ಮಾಡುವುದರ ವಿರುದ್ಧ ರೈತರು ಹೊರಾಡಬೇಕಿದೆ ಎಂದರು.. ಬಗರ್‌ಹುಕುಂ ಸಕ್ರಮಗೊಳಿಸಿ
ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಹಸ್ರಾರು ರೈತರು ಬಗರ್ ಹುಕಂ-ಅರಣ್ಯ ಸಾಗುವಳಿ ಮಾಡುತ್ತಿದ್ದ ಅವುಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ರೈತರ ನ್ಯಾಯಬದ್ದವಾದ ಕೋರಿಕೆಯನ್ನು ಸರ್ಕಾರ ತಿರಸ್ಕರಿಸಿದೆ. ಬಡರೈತರ ಭೂಮಿ ಹಕ್ಕನ್ನು ಖಾತ್ರಿಪಡಿಸಬೇಕಾಗಿದ್ದ ಸರ್ಕಾರ ವಿವಿಧ ರೀತಿಯ ನೆಪಗಳನ್ನು ಮುಂದು ಮಾಡಿ, ರೈತರನ್ನು ದೊಡ್ಡ ಪ್ರಮಾಣದಲ್ಲಿ ಒಕ್ಕಲೆಬ್ಬಿಸುತ್ತಿದೆ ಎಂದರು.ಇದೇ ಸಂರ್ಧಭದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಂಚಾಲಕರಾಗಿ ಚನ್ನರಾಯಪ್ಪ,ಸಹ ಸಂಚಾಲಕರಾಗಿ ಬಿ.ಜಯರಾಮರೆಡ್ಡಿ ,ಬಿ.ಎನ್.ಮುನಿಕೃಷ್ಣಪ್ಪ, ಎಂ.ಎಸ್.ಆನಂದ್,ವೆಂಕಟರಾಜು, ಆದಿನಾರಾಯಣ ಸ್ವಾಮಿ,ಲಕ್ಷ್ಮೀನಾರಾಯಣ,ಡಿ.ಟಿ. ಮುನಿಸ್ವಾಮಿ, ಬೈರೆಡ್ಡಿ ಮಾಸನಪಲ್ಲಿ, ಬೈರೆಡ್ಡಿ ಗವಿನೋರಪಲ್ಲಿ, ಪೆದ್ದೂರು ಲಕ್ಷ್ಮೀನಾರಾಯಣ, ರಘುರಾಮರೆಡ್ಡಿ ಎಂ.ಎನ್, ಲಕ್ಷ್ಮಣರೆಡ್ಡಿ, ಟೌನ್ ಕೃಷ್ಣಪ್ಪ, ವೆಂಕಟರೆಡ್ಡಿ, ಲಕ್ಷ್ಮೀನಾರಾಯಣ ರೆಡ್ಡಿ, ಶಿವಪ್ಪ .ಕಲೀಂ, ಸುಬ್ಬಾರೆಡ್ಡಿ ರವರನ್ನು ಪಧಾಧಿಕಾರಿಗಳಾಗಿ ಆಯ್ಕೆಮಾಡಲಾಯಿತು.