ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗ ನೀಡಿ: ಶಾಸಕ ಬಸವರಾಜ ರಾಯರಡ್ಡಿ

| Published : Feb 01 2024, 02:01 AM IST

ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗ ನೀಡಿ: ಶಾಸಕ ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಓವರ್‌ಹೆಡ್ ಟ್ಯಾಂಕ್ ಪಕ್ಕದಲ್ಲಿ ಗುರುತಿಸಲಾದ ಗಾಂವಠಾಣಾ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಜಾಗ ಯೋಗ್ಯವಾಗಿಲ್ಲ. ಇಲ್ಲಿ ಕಟ್ಟಡ ನಿರ್ಮಿಸಿದರೆ ಬಳಕೆಗೆ ಬರುವುದಿಲ್ಲ

ಯಲಬುರ್ಗಾ: ಗ್ರಾಮದ ಓವರ್‌ಹೆಡ್ ಟ್ಯಾಂಕ್ ಪಕ್ಕದಲ್ಲಿ ಗುರುತಿಸಲಾದ ಗಾಂವಠಾಣಾ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಜಾಗ ಯೋಗ್ಯವಾಗಿಲ್ಲ. ಇಲ್ಲಿ ಕಟ್ಟಡ ನಿರ್ಮಿಸಿದರೆ ಬಳಕೆಗೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಜಮೀನು ಪರಿವೀಕ್ಷಣೆ ನಡೆಸಿ ನಂತರ ಹಮ್ಮಿಕೊಂಡ ಭೂಮಿ ಖರೀದಿ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಅನುದಾನದಿಂದ ಕಟ್ಟಿಸುವ ಯಾವುದೇ ಕಟ್ಟಡಗಳು ಸಾರ್ವಜನಿಕರಿಗೆ ಬಹಳ ದಿನಗಳವರೆಗೆ ಬಾಳಿಕೆ ಬರಬೇಕಾದರೆ ಎಲ್ಲ ಗ್ರಾಮಸ್ಥರು ಸೇರಿಕೊಂಡು ರಸ್ತೆಯ ಪಕ್ಕಕ್ಕೆ ಇರುವ ನಾಲ್ಕು ಎಕರೆ ಜಮೀನು ನೀಡಿದರೆ ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಸುಜ್ಜಜಿತ ಕಟ್ಟಡ ನಿರ್ಮಿಸಿ ಕೊಡುತ್ತೇನೆ ಎಂದರು.ಶೀಘ್ರದಲ್ಲಿಯೇ ಕ್ಷೇತ್ರದಲ್ಲಿ ಪ್ರತಿ ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕಟ್ಟಡ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಕಾಮಗಾರಿ ಕೈಗೊಳ್ಳಲಾಗುವುದು. ಕೆರೆ ತುಂಬಿಸುವ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರು ಆಗುತ್ತಿದೆ. ಶೀಘ್ರದಲ್ಲಿ ಆದಷ್ಟು ಬೇಗನೆ ಹೊಸ ಕೆರೆಗಳ ನಿರ್ಮಾಣದ ಜೊತೆಗೆ ನೀರು ತುಂಬಿಸಲಾಗುತ್ತದೆ. ಕ್ಷೇತ್ರದ ಜನತೆ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಎಸ್.ಆರ್. ನವಲಿಹಿರೇಮಠ, ವೀರನಗೌಡ ಪೋಲಿಸಪಾಟೀಲ, ಕೆರಿಬಸಪ್ಪ ನಿಡಗುಂದಿ, ಈರಪ್ಪ ಕುಡಗುಂಟಿ, ಆನಂದ ಉಳ್ಳಾಗಡ್ಡಿ ಇದ್ದರು.