ಸಾರಾಂಶ
ಕನಕಪುರ: ಕಳೆದ ಏಳೆಂಟು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 9 ತಿಂಗಳಿಂದ ರೈತರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಕಳೆದ ಏಪ್ರಿಲ್ ಒಂದು ತಿಂಗಳಲ್ಲಿ ಮಾತ್ರ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದು ಉಳಿದ ಏಳೆಂಟು ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಕೂಡಲೆ ಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ಹಾಲು ಒಕ್ಕೂಟ ಇದು ಸಹಕಾರ ಸಂಘ, ಆದರೆ ಸರ್ಕಾರ ಇದನ್ನು ನಿಯಂತ್ರಣ ಮಾಡುತ್ತಿರುವುದು ಸರಿಯಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಚುನಾವಣೆಯಲ್ಲಿ ನಿರ್ದೇಶಕರು ಆಯ್ಕೆಯಾಗುತ್ತಾರೆ. ಸರ್ಕಾರದಿಂದ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿ, ಉಳಿದೆಲ್ಲ ನಿರ್ಧಾರ ತೆಗೆದುಕೊಳ್ಳಲು ಆಡಳಿತ ಮಂಡಳಿಗೆ ಅಧಿಕಾರ ಕೊಡಬೇಕು. ಆಗ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಲಿನ ದರ ಪರಿಷ್ಕರಣೆ ಮಾಡಲು ಅನುಕೂಲ ಆಗಲಿದೆ ಎಂದರು.
ರಾಜ್ಯದಲ್ಲಿ ಕಳೆದ ವರ್ಷದ ಬರ ಪರಿಹಾರ ಕೊಡಲು ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡುತ್ತಿತ್ತು. ನೀತಿ ಸಂಹಿತೆ ಇದ್ದರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಈಗಾಗಲೇ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇನ್ನು ಪರಿಹಾರ ಬಿಡುಗಡೆ ಮಾಡಿಲ್ಲ, ಜೊತೆಗೆ ಹೆಕ್ಟೆರ್‌ಗೆ 2 ರಿಂದ 3 ಸಾವಿರ ಅವೈಜ್ಞಾನಿಕ ಬರ ಪರಿಹಾರ ಬಿಡುಗಡೆ ಮಾಡಿದರೆ ನಾವು ಒಪ್ಪುವುದಿಲ್ಲ. ಸರ್ಕಾರ ವೈಜ್ಞಾನಿಕ ಬರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.ಪ್ರಮುಖವಾಗಿ ಕೃಷಿ ಚಟುವಟಿಕೆ ಚುರುಕುಗೊಳ್ಳುವಾಗ ರಸಗೊಬ್ಬರದ ಸಮಸ್ಯೆ ಉಂಟಾಗುತ್ತದೆ. ಯೂರಿಯಾ ತೆಗೆದುಕೊಂಡರೆ ಕಾಂಪ್ಲೆಕ್ಸ್ ತೆಗೆದುಕೊಳ್ಳಬೇಕು ಎಂದು ಷರತ್ತು ಹಾಕುತ್ತಿದ್ದಾರೆ. ಆದರೆ ಸರ್ಕಾರದಲ್ಲಿ ಈ ರೀತಿ ಯಾವುದೇ ನಿಯಮಗಳು ಜಾರಿಯಲ್ಲಿಲ್ಲ. ಬೇಡಿಕೆ ಹೆಚ್ಚಾದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರ ಸುಲಿಗೆ ಮಾಡುತ್ತಾರೆ. ಈವರೆಗೆ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿ ಗಳಾಗಿ ಬೇರೆ ಬೇರೆ ಖಾತೆಗಳ ಸಚಿವರಾಗಿ ಕೆಲಸ ಮಾಡಿರುವ ರಾಜಕಾರಣಿಗಳು ಪ್ರತಿನಿಧಿಸುವ ಕ್ಷೇತ್ರದಲ್ಲಿ ಈವರೆಗೂ ರಸಗೊಬ್ಬರ ದಾಸ್ತಾನು ಮಾಡಲು ಒಂದು ಗೋದಾಮು ನಿರ್ಮಾಣ ಮಾಡದಿರುವುದು ಈ ತಾಲೂಕಿನ ರೈತರ ದುರ್ದೈವ ಎಂದರು.
ಕೇಂದ್ರ ಸರ್ಕಾರ ದೇಶಾದ್ಯಂತ ಅಮುಲ್ ಒಂದೇ ಬ್ರಾಂಡ್ ಮಾಡಲು ಹೊರಟಿದೆ. ಇದರಿಂದ ಕರ್ನಾಟಕ ಹಾಲು ಮಹಾ ಮಂಡಳಿ ಮುಚ್ಚಿ ಹೋಗುತ್ತದೆ. ಈ ಹಿಂದೆಯೂ ದೇಶಾದ್ಯಂತ ಒಂದೇ ಬ್ರಾಂಡ್ ಮಾಡಲು ಹೊರಟಿದ್ದ ವೇಳೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದರು. ಈಗ ಮತ್ತೆ ಅಮುಲ್ ಒಂದೇ ಬ್ರಾಂಡ್ ಮಾಡುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ರೈತರು ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದರೆ ನಮ್ಮ ರಾಜ್ಯದ ನಂದಿನಿ ಬ್ರಾಂಡ್ ಮುಂದೆ ಇರುವುದಿಲ್ಲ. ದೇಶಾದ್ಯಂತ ಒಂದೇ ಬ್ರಾಂಡ್ ಆದರೆ ಅಮುಲ್ ಎಲ್ಲ ನಿರ್ಧಾರ ಗಳನ್ನು ತೆಗೆದುಕೊಳ್ಳಲಿದೆ. ಮುಂದೆ ರೈತರಿಗೂ ಇದರಿಂದ ಸಮಸ್ಯೆ ಆಗಲಿದೆ. ಹಾಗಾಗಿ ಸರ್ಕಾರ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಕರ್ನಾಟಕ ಹಾಲು ಮಹಾ ಮಂಡಳಿಯ ಬ್ರಾಂಡ್ ಉಳಿಯಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಿದೆ ಎಂದರು.ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜು,ಮುಖಂಡ ಮರಿಯಪ್ಪ, ಕುಮಾರ್, ಶಿವಕುಮಾರ್, ಮಲ್ಲೇಶ್, ಪಂಚಮುಖಿ, ಕೆಂಪಣ್ಣ, ಮುನಿಸಿದ್ದೇಗೌಡ, ಮರಿಯಪ್ಪ, ಲಕ್ಷ್ಮಯ್ಯ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02: ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.