ಕಾರ್ಮಿಕ ಇಲಾಖೆಯಲ್ಲಿನ ಹಗರಣವನ್ನು ಸಿಬಿಐಗೆ ನೀಡಿ: ಛಬ್ಬಿ

| Published : Aug 15 2025, 01:00 AM IST

ಕಾರ್ಮಿಕ ಇಲಾಖೆಯಲ್ಲಿನ ಹಗರಣವನ್ನು ಸಿಬಿಐಗೆ ನೀಡಿ: ಛಬ್ಬಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ, ಕಾಂಗ್ರೆಸಿನ ಶಾಸಕ, ಸಚಿವರು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ವಿವಿಧ ಇಲಾಖೆಗಳಲ್ಲಿ ನಡೆದಿರುವ ಹಗರಣಗಳೇ ಇದನ್ನು ಪುಷ್ಟಿಕರಿಸುತ್ತಿವೆ ಆದರೂ ಸರ್ಕಾರ ಕಣ್ತೆರೆಯುತ್ತಿಲ್ಲ.

ಅಳ್ನಾವರ: ರಾಜ್ಯದ ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರುಪಾಯಿ ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ, ಕಾಂಗ್ರೆಸಿನ ಶಾಸಕ, ಸಚಿವರು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ವಿವಿಧ ಇಲಾಖೆಗಳಲ್ಲಿ ನಡೆದಿರುವ ಹಗರಣಗಳೇ ಇದನ್ನು ಪುಷ್ಟಿಕರಿಸುತ್ತಿವೆ ಆದರೂ ಸರ್ಕಾರ ಕಣ್ತೆರೆಯುತ್ತಿಲ್ಲ ಎಂದು ದೂರಿದರು.

ಕಲಘಟಗಿ ಕ್ಷೇತ್ರದ ಶಾಸಕರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮೂರು ಬಾರಿ ಮಂತ್ರಿಗಳಾದವರು. ಅವರು ಜನಸೇವೆಯನ್ನು ಬದಿಗಿಟ್ಟು ರಾಜಕಾರಣವನ್ನು ವ್ಯಾಪಾರೀಕರಣವನ್ನಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಛಬ್ಬಿ, ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಕಳಕಳಿಯೇ ಅವರಲ್ಲಿಲ್ಲ. ಜಿಲ್ಲೆಯಲ್ಲಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಅವರ ಬಗ್ಗೆ ಒಂದು ಮಾತನ್ನು ಆಡದ ಸಚಿವರು, ಕೇಂದ್ರ ಸರ್ಕಾರದ ಬಗ್ಗೆ ಆರೋಪ ಮಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಅವರದೇ ಅಧಿನದಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ನೂರಾರು ಕೋಟಿ ರುಪಾಯಿ ಹಗರಣ ನಡೆದಿದೆ. ಅದರ ಬಗ್ಗೆ ಮಾತನಾಡದ ಲಾಡ್ ಜನರ ದಾರಿ ತಪ್ಪಿಸಲು ಮೋದಿಯವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಮಿಕ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಒಂದು ವೇಳೆ ವಿಳಂಬ ತೋರಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಅತಿಯಾದ ಮಳೆಯಿಂದ ಬೆಳೆಹಾನಿಯಾಗುವ ಮೂಲಕ ಹಸಿರುಬರ ಉಂಟಾಗಿದೆ. ರಾಜ್ಯ ಸರ್ಕಾರ ಕೂಡಲೆ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು. ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ರಸಗೊಬ್ಬರವನ್ನು ರೈತರಿಗೆ ತೊಂದರೆಯಿಲ್ಲದೆ ಸಿಗವಂತೆ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು.

ಈ ವೇಳೆ ಕಲ್ಮೇಶ ಬೆಲೂರ, ಶಿವಾಜಿ ಡೊಳ್ಳಿನ, ಯಲ್ಲಪ್ಪ ಹುಲೆಪ್ಪನವರ, ನಾರಾಯಣ ಮೋರೆ, ಲಿಂಗರಾಜ ಮೂಲಿಮನಿ, ಮಹಾವೀರ ಯಳ್ಳೂರ ಮತ್ತಿತರರು ಇದ್ದರು.