ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಿ

| Published : Nov 16 2025, 02:15 AM IST

ಸಾರಾಂಶ

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಿದ್ದು, ಈ ಭಾಗದಲ್ಲಿ ವಿಪ್ರ ಸಮಾಜದ ಸಂಖ್ಯೆ ಗಣನೀಯವಾಗಿದೆ.

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಸಮೀಪಿಸುತ್ತಿದ್ದು, ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಉದ್ಯಮಿ ಹಾಗೂ ವಿಪ್ರ ಸಮಾಜದ ಮುಖಂಡ ಎಚ್.ಎನ್. ನಂದಕುಮಾರ್ ಆಗ್ರಹಿಸಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀರಾಘವೇಂದ್ರ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಕ್ಷೇತ್ರ ವ್ಯಾಪ್ತಿಯು ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಿದ್ದು, ಈ ಭಾಗದಲ್ಲಿ ವಿಪ್ರ ಸಮಾಜದ ಸಂಖ್ಯೆ ಗಣನೀಯವಾಗಿದೆ. ಸಾಂವಿಧಾನಿಕವಾಗಿಯೇ ಅನೇಕ ಚುನಾವಣೆಗಳಲ್ಲಿ ಜಾತಿ ಆಧಾರಿತ ಮೀಸಲು ಇರುವುದನ್ನು ನಾವು ಕಾಣುತ್ತೇವೆ, ಆದರೆ, ಅದೆಷ್ಟೋ ಸಂದರ್ಭದಲ್ಲಿ ವಿಪ್ರ ಸಮುದಾಯದ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಅರ್ಹತೆ ಇದ್ದರೂ ಟಿಕೆಟ್ ನಿರಾಕರಿಸಿದ ಉದಾಹರಣೆಗಳಿವೆ. ವಿಪ್ರ ಸಮಾಜದ ಮತಗಳೇ ನಿರ್ಣಾಯಕವಾಗಿರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಅಗ್ರಹಿಸಿದರು.

ಎಕೆಬಿಎಂಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಚುನಾಯಿತ ಪ್ರತಿನಿಧಿ ಲಕ್ಷ್ಮಣ ಕುಲಕರ್ಣಿ ಮಾತನಾಡಿ, ಸನಾತನ ಹಿಂದೂ ಧರ್ಮದ ರಕ್ಷಣೆ ಇಂದಿನ ಅಗತ್ಯ. ಕಾರಣ ನಮ್ಮ ಧರ್ಮ ಉಳಿಸುವ ಧ್ಯೇಯ ಹೊಂದಿರುವ ಪಕ್ಷ ಈ ನಿಟ್ಟಿನಲ್ಲಿ ಗಮನ ಹರಿಸಲಿ ಎಂದರು.

ವಿಪ್ರ ಸಮುದಾಯದ ಸಂಘಟನೆ ಇಂದು ಅಗತ್ಯವಾಗಿದ್ದು, ನಾವು ಬ್ರಾಹ್ಮಣ ಮಹಾಸಭೆಯ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದೇವೆ, ಹಾಗೆಯೇ ಪಶ್ಚಿಮ ಪದವೀಧರ ಕ್ಷೇತ್ರದ ನೋಂದಣಿ ಕಾರ್ಯವೂ ಚುರುಕಾಗಿ ನಡೆಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಮೇಯರ್‌ ಹನುಮಂತ ಡಂಬಳ ಮಾತನಾಡಿದರು. ವಿಪ್ರ ಸಮಾಜದ ಮುಖಂಡರಾದ ಎ.ಸಿ. ಗೋಪಾಲ, ಪಾಲಿಕೆ ಸದಸ್ಯೆ ಉಮಾ ಮುಕುಂದ, ಮನೋಹರ ಪರ್ವತಿ, ಸಂಜೀವ ಜೋಶಿ, ಶಂಕರ ಪಾಟೀಲ, ನರೇಂದ್ರ ಕುಲಕರ್ಣಿ, ನರಸಿಂಗರಾವ ಸೋಮ್ಲಾಪೂರ, ಅರವಿಂದ ಕುರ್ತಕೋಟಿ, ಜನಮೇಜಯ ಉಮರ್ಜಿ, ಜಯತೀರ್ಥ ಕಟ್ಟಿ, ಸುಧೀಂದ್ರ ದೇಶಪಾಂಡೆ, ಶೇಷಗಿರಿ ಕುಲಕರ್ಣಿ, ಕೆ.ಡಿ. ಕುಲಕರ್ಣಿ ಮುಂತಾದವರು ಪಾಲ್ಗೊಂಡಿದ್ದರು. ಸುನಿಲ್ ಗುಮಾಸ್ತೆ ಸ್ವಾಗತಿಸಿದರು. ಮದನ ಕುಲಕರ್ಣಿ ವಂದಿಸಿದರು. ದತ್ತಮೂರ್ತಿ ಕುಲಕರ್ಣಿ ನಿರೂಪಿಸಿದರು.