ಸಾರಾಂಶ
ಎಲ್ಲ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಧಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಎಲ್ಲ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಧಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬೇರೆ ಜಿಲ್ಲೆಯ ಅಭ್ಯರ್ಥಿಗಳು ವಿವಿಧ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಬೇರೆ ಜಿಲ್ಲೆಯ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಮುಂದಾಗಿದ್ದು, ಬೇರೆ ಜಿಲ್ಲೆಯ ಅಭ್ಯರ್ಥಿಗಳು ಟಿಕೆಟ್ ಪಡೆದು ಜಯಗಳಿಸಿದ ಬಳಿಕ ಕ್ಷೇತ್ರದ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಅಲ್ಲದೆ, ಕ್ಷೇತ್ರದ ಜನತೆ ಪ್ರತಿಯೊಂದಕ್ಕೂ ಅವರನ್ನು ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜನರ ಕಷ್ಟಸುಖ ಅಲಿಸುವುದಿಲ್ಲ. ಅಭಿವೃದ್ಧಿಗೂ ಗಮನಹರಿಸುವುದಿಲ್ಲ ಎಂದು ಆರೋಪಿಸಿದರು.ಚಾಮರಾಜನಗರವು ಜಿಲ್ಲೆಯಾಗಿ 26 ವರ್ಷಗಳ ಕಳೆದರೂ ಸಮರ್ಪಕವಾಗಿ ಅಭಿವೃದ್ಧಿಯನ್ನು ಕಂಡಿಲ್ಲ. ಕೊಪ್ಪಳ, ಬಾಗಲಕೋಟೆ, ಉಡುಪಿ, ಹಾವೇರಿ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯು ಅಭಿವೃದ್ಧಿಯಿಂದ ವಂಚಿತವಾಗಿದೆ. ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸರ್ಕಾರದಿಂದ ಅನುದಾನಗಳನ್ನು ತಂದು ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಅನುಕೂಲವಾಗಲಿದೆ. ಇದರಿಂದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು. ಆದ್ದರಿಂದ ಕ್ಷೇತ್ರದ ಪ್ರಜ್ಞಾವಂತ ನಾಗರಿಕ ಮತದಾರರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬೇರೆ ಜಿಲ್ಲೆಯವರಿಗೆ ಪ್ರತಿಷ್ಟಿತ ರಾಷ್ಟ್ರೀಯ ಪಕ್ಷಗಳು ಮಣೆ ಹಾಕದೆ ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿರುವ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಅನ್ಯ ಜಿಲ್ಲೆಯವರ ಹಾವಳಿ ಜಾಸ್ತಿಯಾಗುತ್ತಿದ್ದು, ತಮ್ಮ ಆಸ್ತಿ ರಕ್ಷಣೆಗೆ ಚುನಾವಣೆಗೆ ಬಂದು ಸ್ಪರ್ಧಿಸಿ ಗೆಲ್ಲುತ್ತಾರೆ ಎಂದು ದೂರಿದರು.ಹೋರಾಟಗಾರ ನಿಜಧ್ವನಿ ಗೋವಿಂದರಾಜು ಮಾತನಾಡಿ, ಜಿಲ್ಲೆಯ ಬಗ್ಗೆ ಇಂಚಿಂಚು ಗೊತ್ತಿರುವ ಸ್ಥಳೀಯರಿಗೆ ಯಾವುದೇ ಪಕ್ಷವಾಗಲಿ ಟಿಕೆಟ್ ನೀಡಬೇಕು. ಬೇರೆ ಜಿಲ್ಲೆಯವರಿಗೆ ಅವಕಾಶ ಕಲ್ಪಿಸುವುದು ಬೇಡ. ಒಂದು ವೇಳೆ ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದರೆ ಚುನಾವಣಾ ಬಹಿಷ್ಕಾರ ಆಂದೋಲನ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಡಹಳ್ಳಿ ನಾಗರಾಜು, ಗೌರವಾಧ್ಯಕ್ಷ ಈಶ್ವರ್, ಖಜಾಂಚಿ ಉಮ್ಮತ್ತೂರು ಸೋಮಣ್ಣ ಇದ್ದರು.