ಲೋಕಸಭಾ ಚುನಾವಣೆಯಲ್ಲಿ ಅಲೆಮಾರಿ ಸಮಾಜಕ್ಕೆ ಟಿಕೆಟ್ ನೀಡಿ

| Published : Feb 21 2024, 02:00 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಲೆಮಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು.

ಅಲೆಮಾರಿ ಸಮಾಜದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ

ಕನ್ನಡಪ್ರಭ ವಾರ್ತೆ ಹಾವೇರಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಲೆಮಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು, ವಸತಿಯುತ ಶಾಲೆ ಮಂಜೂರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಗೆ ಆಗಮಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಲೆಮಾರಿ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಮುದಾಯಗಳ ಜನರಿಗೆ ನೇರಸಾಲ, ಸರಕು ವಾಹನ, ಭೂ ಒಡೆತನ, ಉದ್ಯಮಶೀಲತೆ, ಗಂಗಾ ಕಲ್ಯಾಣ ಯೋಜನೆ, ಮಹಿಳಾ ಸಂಘಗಳಿಗೆ ನೀಡುವ ಸಹಾಯಧನ ಸೇರಿದಂತೆ ಹಲವು ಸೌಲಭ್ಯ ನೀಡಬೇಕು. ಫಲಾನುಭವಿಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿ, ನಿಗಮಕ್ಕೆ ನೀಡುವ ಅನುದಾನ ಹೆಚ್ಚಿಸಬೇಕು. ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಅಲೆಮಾರಿ ಸಮುದಾಯದ ಜನರಿದ್ದಾರೆ. ಅಲೆಮಾರಿ ಸಮುದಾಯದ ಜನರ ಸಮಸ್ಯೆಗಳನ್ನು ಹೇಳಿಕೊಳ್ಳಲು ರಾಜಕೀಯವಾಗಿ ನಾಯಕತ್ವ ಇಲ್ಲದಂತಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ, ವರ್ಗದ ಅಲೆಮಾರಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ ಸಮುದಾಯದ ಒಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು. ಅದರ ಜೊತೆಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ವರ್ಗದ ಅಲೆಮಾರಿ ಸಮುದಾಯಕ್ಕೆ ರಾಜ್ಯದಲ್ಲಿ ಒಂದು ಲೋಕಸಭಾ ಟಿಕೆಟ್ ನೀಡಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಸಮುದಾಯದ ಜನರ ಪರ ಧ್ವನಿ ಎತ್ತಲು ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಸಮುದಾಯದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಡಾ. ಮಂಜುನಾಥ ವೇಷಗಾರ, ಯಲ್ಲಪ್ಪ ಕೋಮಾರಿ, ಆನಂದ ಕೋಮಾರಿ, ರಾಮುಡು ಮೋತಿ, ಶಾಮೇಶ ಶಿರ್ಶಾಲ ಇತರರು ಇದ್ದರು.