ಸಾರಾಂಶ
ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತ ಮಹಿಳೆಯರಿಗೆ ತನಿಖಾಧಿಕಾರಿಗಳು, ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಹೆಚ್ಚಿನ ಅವಕಾಶ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಸಿ.ಎಚ್. ಹನುಮಂತರಾಯ ಹೇಳಿದರು.
ನಗರದ ಯುವಿಸಿಇ ಅಲುಮ್ನಿ ಅಸೋಸಿಯೇಷನ್‌ನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಅತ್ಯಾಚಾರ, ದೌರ್ಜನ್ಯ, ಲೈಂಗಿಕ ದುರುಪಯೋಗ, ಕಿರುಕುಳ, ಬೆದರಿಕೆ ಪ್ರಕರಣಗಳಲ್ಲಿ ನೊಂದವರು ಅಘಾತಕ್ಕೆ ಒಳಗಾಗಿರುತ್ತಾರೆ. ಇನ್ನ ಈ ಪ್ರಕರಣದ ಆರೋಪಿ ಬಲಾಢ್ಯನಾಗಿರುವ ಕಾರಣ ಹೆದರಿರುತ್ತಾರೆ. ಅದರಿಂದ ಹೊರ ಬಂದು ಧೈರ್ಯವಾಗಿ ಹೇಳಿಕೆ ನೀಡಲು ಅವರಿಗೆ ಹೆಚ್ಚು ಅವಕಾಶಗಳನ್ನು ಮತ್ತು ಸಮಯ ನೀಡಬೇಕು ಎಂದರು.
ಪ್ರಾಣಿ ದೌರ್ಜನ್ಯ ತಡೆಯಲು 41 ಸೆಕ್ಷೆನ್‌ಗಳಿದ್ದರೆ, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬರೀ 21 ಸೆಕ್ಷೆನ್‌ಗಳಿವೆ. ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ಕಾನೂನಿನಲ್ಲಿಯೂ ಲೋಪವಿದೆ. ವಿಡಿಯೋಗಳ ಮೂಲಕ ಸಂತ್ರಸ್ತರ ಗುರುತು ಸಾರ್ವಜನಿಕಗೊಂಡಿರುವ ಹಿನ್ನೆಲೆಯಲ್ಲಿ ಅವರು ಅಘಾತದಿಂದ ಹೊರ ಬರಲು ಪುನರ್ವಸತಿ ಯೋಜನೆಯನ್ನು ಸರ್ಕಾರ ರೂಪಿಸಬೇಕು. ಎಸ್‌ಐಟಿ ತನಿಖೆಯ ತ್ವರಿತಗೊಳಿಸಬೇಕು. ಆರೋಪಿಗೆ ಶಿಕ್ಷ ಕೊಡಸಿಲು ಆಡಳಿತ ಮತ್ತು ವಿರೋಧ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಹೇಳಿದರು.
ಸಂಘಟನೆಯ ಉಪಾಧ್ಯಕ್ಷೆ, ಪ್ಲಾಸ್ಟಿಕ್ ಸರ್ಜನ್ ಡಾ. ಸುಧಾ ಕಾಮತ್ ಮಾತನಾಡಿ, ಪ್ರಜ್ವಲ್ ರೇವಣ್ಣ ಒಬ್ಬ ವಿಕೃತ ಕಾಮಿ. ಅತ್ಯಾಚಾರ ಮಾಡಿ ಹೆಣ್ಣು ಮಕ್ಕಳನ್ನು ಬ್ಲಾಕ್‌ಮೇಲ್ ಮಾಡಲು ವಿಡಿಯೋಗಳನ್ನು ಬಳಸುತ್ತಿದ್ದ. ಪೆನ್‌ಡ್ರೈವ್ ಮೂಲಕ ವಿಡಿಯೋ ಹಾದಿ ಬೀದಿಯಲ್ಲಿ ಸಿಗುವಂತಾದ ಕಾರಣ ಹೆಣ್ಣುಮಕ್ಕಳ ಮಾನಹರಣವಾಗಿದೆ. ಹೆಣ್ಣುಮಕ್ಕಳ ಶೀಲವನ್ನು ವೈಭವೀಕರಿಸುತ್ತಿರುವ ಸಮಾಜದಲ್ಲಿ ಅತ್ಯಾಚಾರಿಗೆ ಶಿಕ್ಷೆ ಕೊಡಿಸುವ ಬದಲು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆದಿದೆ. ಅಶ್ಲೀಲತೆಯು ಮನುಷ್ಯನಲ್ಲಿನ ಸೂಕ್ಷ್ಮ ಸಂವೇದನೆಯನ್ನು ನಾಶಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣನ ವಿಕೃತ ಮನಸ್ಥಿತಿ. ರಾಜಕೀಯ ದರ್ಪ, ಅಧಿಕಾರ ಬಲ, ಕಾನೂನಿನ ಲೋಪದಿಂದ ಅನೇಕ ಹೆಣ್ಣು ಮಕ್ಕಳ ಜೀವನ ಹಾಳಾಗುತ್ತಿದೆ. ಇಂತಹ ವ್ಯಕ್ತಿಗಳು ಸಮಾಜದಲ್ಲಿ ಇರಲು ಯೋಗ್ಯರಲ್ಲ. ಶೀಘ್ರವಾಗಿ ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಪೆನ್‌ಡ್ರೈವ್‌ಗಳನ್ನು ಸಾರ್ವಜನಿಕರಿಗೆ ಹಂಚಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ವಿಕೃತ ಮನಸ್ಥಿತಿಯವರಿಗೆ ಎಚ್ಚರಿಕೆ ಮತ್ತು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಅಧ್ಯಕ್ಷೆ ಎಂ.ಎನ್.ಮಂಜುಳಾ ಒತ್ತಾಯಿಸಿದರು.
ಸಮಾವೇಶದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಉಪಸ್ಥಿತರಿದ್ದರು.