ಸಾರಾಂಶ
ಹುಬ್ಬಳ್ಳಿ: ನಮ್ಮಂತೆ ಮಂಗಳಮುಖಿಯರೂ ನಾಡಿನಲ್ಲಿ ಎಲ್ಲರಂತೆ ಸಮಾನವಾದ ಹಕ್ಕು ನೀಡಬೇಕಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯನಿರ್ವಾಹಕ ಸದಸ್ಯೆ ಯೋಗಿನಿ ದೇಶಪಾಂಡೆ ಹೇಳಿದರು.
ಮಂಗಳವಾರ ಇಲ್ಲಿನ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ಉಭಯ ಆರೂಢರ ಗದ್ದುಗೆಯ ದರ್ಶನ ಪಡೆದು ನಂತರ ಇಲ್ಲಿನ ಸಂಸ್ಕೃತ ಪಾಠಶಾಲೆಯಲ್ಲಿ ಮಂಗಳಮುಖಿಯರನ್ನು ಸನ್ಮಾನಿಸಿ, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮಾತನಾಡಿದರು.ದೇಶದ ಪ್ರಗತಿಯಲ್ಲಿ ಶೇ. 18-20ರಷ್ಟು ಮಹಿಳೆಯರ ಕೊಡುಗೆಯಿದೆ. ಮಹಿಳಾ ಮತದಾರರ ಸಂಖ್ಯೆ ಪುರುಷರ ಸಂಖ್ಯೆಗೆ ಸರಿಸಮನಾಗಿದೆ. ಹೆಣ್ಣು ಮಕ್ಕಳಿಗಾಗಿ ಹಾಗೂ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ಯೋಜನೆಗಳನ್ನು ನೀಡಿದ್ದು, ಆ ಯೋಜನೆಗಳ ಪ್ರಚಾರಾರ್ಥವಾಗಿ ದೇಶದ ಎಲ್ಲ ರಾಜ್ಯಗಳಲ್ಲಿನ ಪ್ರತಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಓರ್ವ ಕಾರ್ಯನಿರ್ವಾಹಕ ಸದಸ್ಯೆ ಕಳಿಸಿ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಅದೇ ರೀತಿ ಹುಬ್ಬಳ್ಳಿ- ಧಾರವಾಡದಲ್ಲಿ ಮಂಗಳವಾರ ಹಾಗೂ ಬುಧವಾರ ಹಲವು ಕಡೆಗಳಲ್ಲಿ ಸಭೆ, ಮಂಗಳಮುಖಿಯರೊಂದಿಗೆ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಬೂತ್ ಮಟ್ಟದ ಸಭೆ ಅಲ್ಲದೇ ಕಾರ್ಯಕರ್ತೆಯರ ಮನೆಯಲ್ಲಿಯೇ ವಾಸ, ಊಟ. ಕಮಲಮಿತ್ರ ಕಾರ್ಯಕ್ರಮ, ಸೆಲ್ಫಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳ ಕುರಿತು ಮನೆಮನೆಗೂ ಮುಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿದರು. ಪಾಲಿಕೆಯ ಮಾಜಿ ಉಪಮೇಯರ್ ಉಮಾ ಮುಕುಂದ, ಸೀಮಾ ಲದ್ವಾ, ಪೂರ್ಣಿಮಾ ಸಿಂಧೆ, ಅನುರಾಧ ಚಿಲ್ಲಾಳ, ಜ್ಯೋತಿ ಪಾಟೀಲ, ರತ್ನಾ ಗಬ್ಬೂರ, ಶೋಭಾ ನಾಕೋಡ, ಲೀಲಾವತಿ ಪಾಸ್ತೆ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ವಿನಾಯಕ ಘೋರ್ಪಡೆ ಸೇರಿದಂತೆ ಹಲವರಿದ್ದರು.
ಸಮಸ್ಯೆಗೆ ಕಿವಿಯಾದ ಯೋಗಿನಿಇಲ್ಲಿನ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೋಗಿನಿ ದೇಶಪಾಂಡೆ ಅವರು ಮಂಗಳಮುಖಿಯರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಹೆಗ್ಗೇರಿಯ ಮಂಗಳಮುಖಿ ಪೂಜಾ, ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮಂಗಳಮುಖಿಯರಿದ್ದು, ಇಂದಿಗೂ ನಮಗೆ ಇರಲು ವಸತಿ ಸೌಲಭ್ಯವಿಲ್ಲ, ಸಾಮಾಜಿಕ ಸ್ಥಾನಮಾನ ದೊರೆಯುತ್ತಿಲ್ಲ, ಇತರರಂತೆ ಗೌರವಯುತವಾಗಿ ಜೀವನ ನಡೆಸಲು ಬೇಕಾದ ವ್ಯವಸ್ಥೆಯಿಲ್ಲ. ಜನತೆ ಇಂದಿಗೂ ನಮ್ಮನ್ನು ಕೀಳಾಗಿ ಕಾಣುವ ಪ್ರವೃತ್ತಿ ಮುಂದುವರಿದಿದೆ.ನಮ್ಮ ನಿತ್ಯದ ಜೀವನ ನಡೆಸಲು ಸಂಕಷ್ಟ ಎದುರಿಸುವಂತಾಗಿದೆ. ಬಿಕ್ಷಾಟನೆ ಮಾಡಬಾರದು ಎನ್ನುತ್ತಾರೆ. ಬಿಕ್ಷಾಟನೆ ಮಾಡದಿದ್ದರೆ ನಮ್ಮ ಜೀವನ ನಡೆಯುವುದಿಲ್ಲ. ಸ್ವಂತ ಉದ್ಯೋಗಕ್ಕೆ ಕೈಹಾಕಿದರು ಜನರು ನಮ್ಮನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದಾರೆ. ಸರ್ಕಾರ ಮಂಗಳಮುಖಿಯರಿಗೆ ವಯಸ್ಸಿನ ಮಿತಿ ಹೇರದೇ ಸರ್ಕಾರಿ ಉದ್ಯೋಗ ನೀಡಬೇಕು. ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.