ದ.ಕ. ರಿಕ್ಷಾಗಳಿಗೂ ಏಕರೂಪದ ಪರ್ಮಿಟ್‌ ನೀಡಿ: ಗ್ರಾಮಾಂತರ ರಿಕ್ಷಾ ಚಾಲಕರ ಆಗ್ರಹ

| Published : Mar 06 2024, 02:18 AM IST

ದ.ಕ. ರಿಕ್ಷಾಗಳಿಗೂ ಏಕರೂಪದ ಪರ್ಮಿಟ್‌ ನೀಡಿ: ಗ್ರಾಮಾಂತರ ರಿಕ್ಷಾ ಚಾಲಕರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಏಕರೂಪದ ಪರ್ಮಿಟ್‌ ನೀಡುವಂತೆ ಸಂಬಂಧಪಟ್ಟವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮೂಲಕ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಆಟೋ ರಾಜಕನ್ಮಾರ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಜಲೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲೆಯನ್ನು ಹೊರತುಪಡಿಸಿದರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಆಟೋರಿಕ್ಷಾಗಳಿಗೆ ವಿವಿಧ ಬಗೆಯ ಪರ್ಮಿಟ್‌ಗಳು ಇಲ್ಲ. ದಕ್ಷಿಣ ಕನ್ನಡದಲ್ಲೂ ಆಟೋರಿಕ್ಷಾಗಳಿಗೆ ಏಕರೂಪದ ಪರ್ಮಿಟ್‌ ನೀಡಬೇಕು. ಜಿಲ್ಲಾಡಳಿತ 15 ದಿನದೊಳಗೆ ಈ ಬಗ್ಗೆ ಸ್ಪಂದಿಸದಿದ್ದರೆ ಜಿಲ್ಲೆಯ ರಿಕ್ಷಾ ಚಾಲಕರನ್ನು ಒಗ್ಗೂಡಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಾಂತರ ರಿಕ್ಷಾ ಚಾಲಕರು ಎಚ್ಚರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಆಟೋ ರಾಜಕನ್ಮಾರ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಜಲೀಲ್‌, ಜಿಲ್ಲೆಯಲ್ಲಿ ಪ್ರಸ್ತತ ನಗರ ಪ್ರದೇಶಗಳಿಗೆ ಒಂದು ರೀತಿಯ ಪರ್ಮಿಟ್, ಗ್ರಾಮಾಂತರದ ರಿಕ್ಷಾಗಳಿಗೆ ಇನ್ನೊಂದು ಪರ್ಮಿಟ್‌ ವ್ಯವಸ್ಥೆ ಇದೆ. ಇಂಥ ಭೇದ ಸರಿಯಲ್ಲ, ಉಳಿದ ಜಿಲ್ಲೆಗಳಲ್ಲಿ ಇರುವಂತೆ ಏಕರೂಪದ ಪರ್ಮಿಟ್‌ ನೀಡಬೇಕು ಎಂದು ಒತ್ತಾಯಿಸಿದರು.10 ಸಾವಿರ ರು. ದಂಡ ಹೊರೆ: ಗ್ರಾಮಾಂತರದ ರಿಕ್ಷಾಗಳು ಮೂರು ಕಿ.ಮೀ. ಆಚೀಚೆ ಸಂಚರಿಸಿದರೆ ನಗರ ಪ್ರದೇಶ ಬರುತ್ತದೆ, ಗ್ರಾಮಾಂತರದ ಗಡಿ ದಾಟಿದರೆ ಸಾಕು ಆರ್‌ಟಿಒ ಅಧಿಕಾರಿಗಳು 10 ಸಾವಿರ ರು. ದಂಡ ಹಾಕುತ್ತಾರೆ. ತಿಂಗಳಿಗೆ ಏನಿಲ್ಲವೆಂದರೂ 10-20 ಚಾಲಕರ ಮೇಲೆ ದಂಡ ಹಾಕುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಸಣ್ಣ ದುಡಿಮೆ ದುಡಿಯುವವರ ಮೇಲೆ ಈ ಬೃಹತ್‌ ಮೊತ್ತ ತೀವ್ರ ಹೊರೆಯಾಗುತ್ತಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹಿಂದೆ ಆರ್‌ಟಿಒ ಬಳಿ ಮನವಿ ಮಾಡಿದ್ದಕ್ಕೆ ಒಂದು ತಿಂಗಳು ದಂಡ ಹಾಕುವುದು ನಿಲ್ಲಿಸಿದ್ದರು. ಈಗ ಮತ್ತೆ ಆರಂಭವಾಗಿದೆ ಎಂದು ಜಲೀಲ್‌ ಅಳಲು ತೋಡಿಕೊಂಡರು.ಆದ್ದರಿಂದ ಏಕರೂಪದ ಪರ್ಮಿಟ್‌ ನೀಡುವಂತೆ ಸಂಬಂಧಪಟ್ಟವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮೂಲಕ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರಸಾದ್‌ ಕುರ್ನಾಡು, ಸಿದ್ದೀಕ್‌, ಕಿರಣ್‌ ಕುಮಾರ್‌, ಶಮೀರ್‌, ಉಸ್ಮಾನ್‌, ಉಸ್ಮಾನ್‌ ಸಜಿಪ, ಶಫೀಕ್‌, ರಝಾಕ್‌ ಮತ್ತಿತರರು ಇದ್ದರು.ಆಸ್ಪತ್ರೆಗೆ ಕರೆದೊಯ್ದರೆ ದಾಖಲೆ ಎಲ್ಲಿಂದ?: ರಿಕ್ಷಾ ಚಾಲಕ ಪ್ರಸಾದ್‌ ಕುರ್ನಾಡು ಮಾತನಾಡಿ, ಗ್ರಾಮಾಂತರದಿಂದ ನಗರದ ಆಸ್ಪತ್ರೆಗೆ ರೋಗಿಗಳನ್ನು ರಿಕ್ಷಾದಲ್ಲಿ ಕರೆತಂದು ದಾಖಲಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಆಸ್ಪತ್ರೆಗೆ ಬಂದು ವಾಪಸ್‌ ಹೋಗುವಾಗ ದಾಖಲೆ ಕೇಳಿ ದಂಡ ಹಾಕುತ್ತಾರೆ. ಆಸ್ಪತ್ರೆಗೆ ಬಂದಿದ್ದಕ್ಕೆ ದಾಖಲೆ ಎಲ್ಲಿಂದ ತರುವುದು? ಅದೇ ರೀತಿ ರಿಕ್ಷಾಕ್ಕೆ ಗ್ಯಾಸ್‌ ಹಾಕಲು ನಗರದ ಗಡಿ ದಾಟಿ ಬಂದರೂ ದಂಡ ಹಾಕ್ತಾರೆ. ಹೀಗೆ ಮಾಡುವುದರಿಂದ ಬಡ ರಿಕ್ಷಾ ಚಾಲಕರು ಕಂಗೆಟ್ಟಿದ್ದಾರೆ ಎಂದು ಹೇಳಿದರು.