ಸಾರಾಂಶ
- ಗಾಂಧಿ ಜಯಂತಿ: ಮದ್ಯಪಾನಮುಕ್ತರಿಗೆ ಸನ್ಮಾನ, ಜನಜಾಗೃತಿ ಜಾಥಾ ಸಮಾವೇಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಗಾಂಧಿ ಜಯಂತಿಯಂದು ಮದ್ಯಪಾನ ತ್ಯಜಿಸುವಂತಹ ದೃಢವಾದ ನಿರ್ಧಾರವನ್ನು ನೀವು ಮಾಡಿರುವುದು ಉತ್ತಮ ಕಾರ್ಯ. ಇದು ಸನ್ಮಾನ ಮಾಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೇ, ಜೀವನದ ಉದ್ದಕ್ಕೂ ಮುಂದುವರಿಸಿದರೆ ಈ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರಲಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ದಾವಣಗೆರೆ ಜಿಲ್ಲೆ, ದಾವಣಗೆರೆ ಗ್ರಾಮಾಂತರ ಯೋಜನಾ ಕಚೇರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮದ್ಯಪಾನಮುಕ್ತರಿಗೆ ಸನ್ಮಾನ, ಜನಜಾಗೃತಿ ಜಾಥಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಸನಿಗಳು ಮದ್ಯಪಾನ ತ್ಯಜಿಸಿ ನಿಮ್ಮ ಕುಟುಂಬದ ಜೊತೆಗೆ ಸಾಮರಸ್ಯದಿಂದ ಜೀವನ ಸಾಗಿಸಬೇಕು ಎಂದು ಮನವಿ ಮಾಡಿದರು.ಕುಟುಂಬ ಸಂತೋಷದಿಂದ ಇರಬೇಕಾದರೆ ಪುರುಷರು ದುಶ್ಚಟಗಳಿಗೆ ಬಲಿಯಾಗಬಾರದು. ಕುಟುಂಬದ ತಾಯಂದಿರು ಅವಶ್ಯಕತೆಗಿಂತ ಹೆಚ್ಚು ಸಾಲ ಮಾಡದೇ ಕಡಿಮೆ ಬಡ್ಡಿಗೆ ಸಾಲ ನೀಡುವ ಸಂಘ ಸಂಸ್ಥೆಗಳ ನೆರವು ಬಳಸಿಕೊಳ್ಳಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗುವ ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಧರ್ಮಸ್ಥಳ ಸಂಘ ಕೆರೆಗಳ ಅಭಿವೃದ್ಧಿ, ಜನಗಳನ್ನು ಬದಲಾವಣೆ ಮಾಡುವಂತಹ ಒಳ್ಳೆಯ ಕೆಲಸ ಮಾಡುತ್ತಿದೆ. ಮಹಿಳೆಯರು ಧರ್ಮಸ್ಥಳ ಸಂಘದಿಂದಾಗಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಮದ್ಯಪಾನಮುಕ್ತರಿಗೆ ಹೂ ನೀಡಿ, ಅಭಿನಂದಿಸಿ ಮಾತನಾಡಿ, ಮದ್ಯವ್ಯಸನಕ್ಕೆ ಪುರುಷರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಮದ್ಯ ವ್ಯಸನದಿಂದ ಕುಟುಂಬಗಳ ಜೊತೆ ಸಮಾಜವೂ ನಾಶವಾಗುತ್ತದೆ. ಕುಟುಂಬದ ಜೊತೆ ನೆಮ್ಮದಿಯಿಂದಿರಲು ಮದ್ಯಪಾನ ವ್ಯಸನ ಸಂಪೂರ್ಣ ತ್ಯಜಿಸಬೇಕು ಎಂದರು.
ಪುರುಷರು ವ್ಯಸನಗಳಿಗೆ ದಾಸರಾಗುವುದನ್ನು, ಮಹಿಳೆಯರು ಧಾರಾವಾಹಿಗಳ ನೋಡುವುದನ್ನು ಬಿಟ್ಟು ಮಕ್ಕಳಿಗೆ ಶಿಕ್ಷಣ, ಸಾಧನೆ ಬಗ್ಗೆ ತಿಳಿಸಬೇಕು. ಮಹಿಳೆಯರಿಗೆ ಕಟ್ಟುಪಾಡುಗಳನ್ನು ಹಾಕದೇ, ಮಹಿಳೆಯರಿಗೆ ಕೇವಲ ಹೊಂದಾಣಿಕೆ ಮಾಡಿಕೊಂಡು ಹೋಗಲು ಹೇಳದೇ, ಮಹಿಳಾ ಸಬಲೀಕರಣ ಮೂಲಕ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ಸಾಮಾಜಿಕ, ಸಾಂಸ್ಕೃತಿಕವಾಗಿ ಕುಡಿತ ಆಘಾತಕಾರಿ ಕ್ರಿಯೆಯಾಗಿದೆ. ಕುಡಿತದ ಚಟದಿಂದ ಯಾವೊಂದು ಕುಟುಂಬ ಉದ್ಧಾರವಾಗಿರುವ ಉದಾಹರಣೆಗಳಿಲ್ಲ. ಕುಡಿತದಿಂದಲೇ ಅಪಘಾತಗಳು, ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ. ಆದ್ದರಿಂದ ಮದ್ಯಪಾನ ಮುಕ್ತರಾಗಿರುವವರು ಮತ್ತೆ ಮದ್ಯ ಸೇವಿಸಬೇಡಿ ಎಂದು ತಿಳಿಹೇಳಿದರು.
ಸೇವಾ ದಳದ ಜಿಲ್ಲಾ ಸಂಚಾಲಕ ಪಕ್ಕೀರಗೌಡ ನಾ ಹಳೇಮನೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಗಾಂಧೀಜಿ ನಮ್ಮೆಲ್ಲರ ಧ್ವನಿಯಾಗಿದ್ದು, ನೆಮ್ಮದಿಯ ಜೀವನಕ್ಕೆ ಕಾರಣರಾಗಿದ್ದಾರೆ. ಗಾಂಧೀಜಿ ದೇಶದ ನೋಟುಗಳಲ್ಲಿ ಅಲ್ಲ, ನಮ್ಮ ನೋಟದಲ್ಲಿ ಇರಬೇಕು. ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ನಾವು ಜಗತ್ತನ್ನು ನೋಡಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತ ಪ್ರಧಾನಿಯಾಗಿ ಸೈನಿಕರಿಗೆ ಶಕ್ತಿಯಾಗಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಜನರಿಗಾಗಿ ಅಗ್ರಗಣ್ಯ ಕೆಲಸ ಮಾಡುತ್ತಿದೆ ಎಂದರು.ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹೊನ್ನಾಳಿ ಬಾಬಣ್ಣ, ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ, ಜಿಲ್ಲಾ ಜನಜಾಗೃತಿ ಸದಸ್ಯರಾದ ಅಣಬೇರು ಮಂಜಣ್ಣ, ಕುಸುಮ ಶ್ರೇಷ್ಠಿ, ಮಲ್ಲಿಕಾರ್ಜುನ ಕೈದಾಳೆ, ಅನಿತಾ, ಮರಿಯಾಚಾರಿ, ಬಿ.ವಿರೂಪಾಕ್ಷಪ್ಪ ಇತರರು ಇದ್ದರು.
- - - -3ಕೆಡಿವಿಜಿ39ಃ:ಕಾರ್ಯಕ್ರಮದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಮದ್ಯಪಾನ ಮುಕ್ತರಿಗೆ ಹೂ ನೀಡಿ ಅಭಿನಂದಿಸಿದರು. ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.