ನೇಹಾ ಹತ್ಯೆ ಆರೋಪಿಗೆ ಯುಪಿ ಮಾದರಿ ಶಿಕ್ಷೆ ನೀಡಿ

| Published : Apr 23 2024, 12:48 AM IST

ಸಾರಾಂಶ

ಈ ಕೊಲೆ ಪ್ರಕರಣದ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡಬಾರದು. ಹೆಣ್ಣು ಮಕ್ಕಳಿಗೆ ಭಾರತದಲ್ಲಿ ತಾಯಿ ಸ್ಥಾನ ನೀಡಲಾಗಿದೆ. ಆದ್ದರಿಂದ ರಾಕ್ಷಸ ಮನಸ್ಥಿತಿ ಹೊಂದಿರುವ ಕೊಲೆಗಡುಕನನ್ನು ರಾಜ್ಯ ಸರ್ಕಾರ ಎನ್‌ಕೌಂಟರ್ ಮಾಡಬೇಕು.

ಹುಬ್ಬಳ್ಳಿ:

ವಿದ್ಯಾರ್ಥಿನಿ ನೇಹಾ ಹತ್ಯೆ ಮಾಡಿರುವ ಕೊಲೆಗಡುಕನಿಗೆ ರಾಜ್ಯ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ನೀಡಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.

ಇಲ್ಲಿನ ನೇಹಾ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವನಿಗೆ ನೀಡುವ ಶಿಕ್ಷೆ ಹಿಂದೂ ಯುವತಿಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಮುಸ್ಲಿಮರಿಗೆ ಭಯ ಮೂಡಿಸಬೇಕು ಎಂದರು.

ಈ ಕೊಲೆ ಪ್ರಕರಣದ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡಬಾರದು. ಹೆಣ್ಣು ಮಕ್ಕಳಿಗೆ ಭಾರತದಲ್ಲಿ ತಾಯಿ ಸ್ಥಾನ ನೀಡಲಾಗಿದೆ. ಆದ್ದರಿಂದ ರಾಕ್ಷಸ ಮನಸ್ಥಿತಿ ಹೊಂದಿರುವ ಕೊಲೆಗಡುಕನನ್ನು ರಾಜ್ಯ ಸರ್ಕಾರ ಎನ್‌ಕೌಂಟರ್ ಮಾಡಬೇಕು. ಆದರೆ, ಕಾಂಗ್ರೆಸ್‌ಗೆ ಮುಸ್ಲಿಮರ ಮತಗಳು ಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಮುಸ್ಲಿಮರ ತುಷ್ಟೀಕರಣ ಮಾಡುವುದು ಸರಿಯಲ್ಲ. ಈ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೇಹಾ ಕೊಲೆ ಪ್ರಕರಣ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಐಡಿಗೆ ವಹಿಸುವ ಮೂಲಕ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಬದಲಾಗಿ ಸಿಬಿಐಗೆ ಈ ಪ್ರಕರಣ ನೀಡುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದ ಅವರು, ಹಿಂದೂ ಯುವತಿಯ ಕೊಲೆಗೆ ದೊಡ್ಡ ಪ್ರಮಾಣದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು, ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ನೀಡುತ್ತಿರುವ ಹೇಳಿಕೆ ಅವರಿಗೆ ಗೌರವ ತರುವುದಿಲ್ಲ. ಇವರ ಮನೆಯಲ್ಲಿಯೇ ಈ ರೀತಿಯ ಪ್ರಕರಣವಾಗಿದ್ದರೆ ಇದೇ ರೀತಿಯ ಹೇಳಿಕೆ ನೀಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಸಿಎಂ, ಡಿಸಿಎಂ ಇಲ್ಲಿಗೆ ಬಂದು ಸಾಂತ್ವನ ಹೇಳಲಿ ಬಿಡಲಿ. ಆದರೆ, ಹಿಂದೂ ಯುವತಿಯರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಇನ್ನು ಎನ್‌ಕೌಂಟರ್ ಕಾನೂನು ಜಾರಿ ಎಂದು ಸಚಿವ ಸಂತೋಷ ಲಾಡ್ ಹೇಳಿಕೆ ನೀಡುವ ಬದಲು, ಎನ್‌ಕೌಂಟರ್ ಕಾನೂನು ಜಾರಿಯಾಗದಿದ್ದರೆ, ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಬೇಕು. ಇದಕ್ಕೆ ನಾವು ಸಹ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದರು.