Give us our share of water: Farmers' appeal
-ಹನಗವಾಡಿ ರಾ.ಹೆ ತಡೆದು ರೈತರ ಪ್ರತಿಭಟನೆ । ಸಿಎಂಗೆ ನೀರು ಬಿಡಲು ಅನ್ನದಾತ ಒಕ್ಕೊರಲ ಆಗ್ರಹಕನ್ನಡಪ್ರಭ ವಾರ್ತೆ ಹರಿಹರ
ಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ತಾಲೂಕಿನ ರೈತರು ಹನಗವಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ೪೮ ತಡೆ ನಡೆಸಿ ಪ್ರತಿಭಟಿಸಿ, ಉಪವಿಭಾಗಧಿಕಾರಿ ಸಂತೋಷ್ ಕುಮಾರ್ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗೆ ನೀರು ಬಿಡುವಂತೆ ಮನವಿ ಸಲ್ಲಿಸಲಾಯಿತು.ರೈತರ ಭೂಮಿಗೆ ನೀರು ಹರಿಸುವುದಕ್ಕಾಗಿಯೇ ಡ್ಯಾಂ ಕಟ್ಟಲಾಗಿದೆ. ರೈತರ ಭೂಮಿಗೆ ನೀರು ಹರಿಸಿದರೆ ಸಮಸ್ತ ಜನರಿಗೆ ಅನ್ನದಾತ (ಭತ್ತ)ವನ್ನು ಬೆಳೆದು ನೀಡುತ್ತಾನೆ. ರೈತರ ಗದ್ದೆಗೆ ನೀರು ಬಿಡಿ ಸ್ವಾಮಿ. ಮಾನವರು ಹೊಟ್ಟೆಗೆ ಅನ್ನ ತಿನ್ನುತ್ತಾರೆ, ಅಡಕೆ ತಿನ್ನುವುದಿಲ್ಲ, ನಮ್ಮ ಪಾಲಿನ ನೀರನ್ನು ನಮ್ಮ ಗದ್ದೆಗೆ ಹರಿಸಿ. ರೈತರ ಕಷ್ಟ ಅರ್ಥ ಮಾಡಿಕೊಳ್ಳಿ. ನಮ್ಮ ಗದ್ದೆಗಳಿಗೆ ನೀರು ಹರಿಸುವವರೆಗೂ ಹೋರಾಟ ನಿಲ್ಲುವುದಿಲ್ಲವೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಪೂಜಾರ್, ಭದ್ರಾ ಯಾರಪ್ಪನ ಸ್ವತ್ತಲ್ಲ. ಭದ್ರ ಜಲಾಶಯದಲ್ಲಿ ಸಂಗ್ರಹಗೊಂಡಿರುವ ನಮ್ಮ ಪಾಲಿನ ನೀರನ್ನು ಬಳಕೆ ಮಾಡುವ ಹಕ್ಕು ನಮಗಿದೆ. ಈ ಹಿಂದೆ ಜಲಾಶಯದಲ್ಲಿ 160 ಅಡಿ ಇದ್ದಾಗಲೂ ನೀರು ಕೊಟ್ಟಿದ್ದೀರಿ. ನೀವು ಬೆಂಗಳೂರಿನಲ್ಲಿ ಮೀಟಿಂಗ್ ಮಾಡಿ ನಿಮ್ಮಿಷ್ಟಕ್ಕೆ ತೀರ್ಮಾನ ಮಾಡಿಕೊಂಡಿದ್ದೀರಿ. ಅಕ್ಟೋಬರ್ ತಿಂಗಳವರೆಗೆ ನೀರು ಬಿಡಲು ಸಾಧ್ಯವಿದ್ದು, ಅಲ್ಲಿವರೆಗೆ ಭೂಮಿಗೆ ನೀರು ಕೊಡಿ. ಭತ್ತ ಬೆಳೆಗಾರರ ಕಷ್ಟವನ್ನು ಮಂತ್ರಿಗಳು ಅರಿಯಬೇಕು. ಅಲ್ಲದೇ ತುಂಗಭದ್ರಾ ನೀರನ್ನ ಆಂಧ್ರಪ್ರದೇಶಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಭದ್ರಾ ಮೇಲ್ದಂಡೆಗೆ ನೀರು:
ಭದ್ರಾ ಮೇಲ್ದಂಡೆಗೆ ನೀರು ಕೊಟ್ಟು ಹಿರಿಯೂರು ಚುನಾವಣೆ ಗೆಲ್ಲುವ ಉದ್ದೇಶ ಹೊಂದಿರುವುದು ಗೊತ್ತಿದೆ. ಭಾನುವಳ್ಳಿ ರೈತರು 18 ವರ್ಷದಿಂದ ಮಳೆಗಾಲದ ಬೆಳೆ ಬೆಳೆಯುತ್ತಿದ್ದಾರೆ. ಸಾಲಕಟ್ಟೆ, ಮಿಟ್ಲಕಟ್ಟೆ, ಭಾಗದಲ್ಲಿ ತಡವಾಗಿ ಭತ್ತ ನಾಟಿ ಮಾಡಿ, ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಡಿಸಿ ಮೂಲಕ ನೀರು ಕೊಡುತ್ತೇವೆ ಎಂದು ಹೇಳಿದರೆ ರಾ.ಹೆ ಬಂದ್ ಮಾಡುವುದಿಲ್ಲ. ಇಲ್ಲದಿದ್ದರೆ ನಾವು ಹೆದ್ದಾರಿ ಬಂದ್ ಮಾಡುತ್ತೇವೆ. ಭದ್ರಾ ಮೇಲ್ದಂಡೆಗೆ ಯಾವಾಗ ನೀರು ಕೊಡಬೇಕು ಎಂಬುದು (5.5 ಟಿ ಎಂಸಿ ) ನಿಮಗೆ ಗೊತ್ತಿಲ್ಲದೆ ಮುಖ್ಯಮಂತ್ರಿಗಳು ಏಕೆ ನಿರ್ಧಾರ ತೆಗೆದು ಕೊಳ್ಳಬಾರದು ಎಂದು ಚಂದ್ರಶೇಖರ ಪೂಜಾರ ಗುಡುಗಿದರು.ಭಾರತೀಯ ರೈತ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಲಿಂಗರಾಜ್ ಮಾತನಾಡಿ, ಭದ್ರಾ ಕಾಡ ಸಮಿತಿಯವರು ಹರಿಹರ ತಾಲೂಕಿನ ಕೊನೆ ಭಾಗದ ರೈತರನ್ನ ಕಾಡುವುದೇ ಅವರ ಕೆಲಸವಾಗಿದೆ. 120 ದಿನ ನೀರು ಕೊಡಬೇಕು. ಪ್ರತಿದಿನ 4 ಸಾವಿರ ಕ್ಯುಸೆಕ್ ನೀರು ಡ್ಯಾಮಿಗೆ ಬಂದು ಸೇರುತ್ತದೆ.
ಆದ್ದರಿಂದ ಬೇಸಿಗೆ ಬೆಳೆಗೂ ನೀರು ಸಾಕಾಗುತ್ತದೆ. ಡ್ಯಾಮಿನಲ್ಲಿ ಶೇ.82ರಷ್ಟು ನೀರಿದ್ದು, ಈ ಸರ್ಕಾರಕ್ಕೆ ಜ್ಞಾನವೇ ಇಲ್ಲದಂತಾಗಿದ್ದು, ಮಳೆಗಾಲ ಬೆಳೆಗೆ ನೀರು ಕೊಟ್ಟರೆ ತೊಂದರೆ, ಇಲ್ಲವೇ ಕೊಡುವುದು ಸೂಕ್ತ. ನೀರು ಬಿಡುವವರೆಗೂ ನಿರಂತರ ಹೋರಾಟ ಇರುತ್ತೆ. ಇದರಲ್ಲಿ ಮಧು ಬಂಗಾರಪ್ಪ ರಾಜಕೀಯ ಉದ್ದೇಶ ಇದೆ. ಅಪ್ಪರ್ ಭದ್ರಗೆ ನೀರು ಕೊಟ್ಟು ಹಿರಿಯೂರು ಚುನಾವಣೆ ಗೆಲ್ಲುವುದೇ ಇವರ ಉದ್ದೇಶ ಎಂದು ಆರೋಪಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ರೈತರ ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು. ಹೊಳೆಸಿರಿಗೆರೆ ರಾಜಪ್ಪ, ನಾಗರಾಜ್ ಅಂಗಡಿ ಕೆ.ಬೇವಿನಹಳ್ಳಿ, ನಾಗೇಶ್, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಮಾತನಾಡಿದರು.
ಕುಣೆಬೆಳಕೇರಿ ಮಲ್ಲೇಶಪ್ಪ ಮಾತನಾಡಿ, ಸಚಿವ ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರು ರೈತರಲ್ಲ, ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಚುನಾವಣೆಗಾಗಿ ಮಾಡುವ ದುರುದ್ದೇಶಗಳು ನಮಗೆ ತಿಳಿದಿವೆ. ಅದಕ್ಕೆ ನಮ್ಮ ಭಾಗದ ರೈತರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಅಂಕಿ-ಅಂಶ ಪ್ರಕಾರ ನೀರು ಕೊಡಿ ಸ್ವಾಮಿ 4 ಬಾರಿ ಸಚಿವರಾದ ಮಲ್ಲಣ್ಣರವರು ನಮ್ಮ ಭಾಗಕ್ಕೆ ನೀರು ಕೊಡಿಸಲು ಯಾಕೆ ತಾರತಮ್ಯ ಮಾಡುತ್ತಿದ್ದೀರಿ. ಭದ್ರಾ ಮೇಲ್ದಂಡೆಗೆ ಹೇಗೆ ನೀರು ಕೊಡಿಸಿದ್ರೋ ಹಾಗೆ, ನಮ್ಮ ಭಾಗದ ರೈತರಿಗೆ ನೀರು ಕೊಡಿಸಿ ಇಲ್ಲವಾದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಲ್ಲದೇ, ನಿಮ್ಮ ಕುಟುಂಬದ ಎಲ್ಲರ ರಾಜೀನಾಮೆ ಸಹ ಕೊಡಿಸಿ ಎಂದರು.ಈ ಸಂದರ್ಭದಲ್ಲಿ ಹನಗವಾಡಿ ರೇವಣಸಿದ್ದಪ್ಪ, ಗುರುನಾಥ, ಲಿಂಗರಾಜ್ ವಿವಿಧ ಭಾಗದ ರೈತ ಮುಖಂಡರುಗಳು, ಹಿರಿಯರು ಇದ್ದರು.
ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿವೈಎಸ್ಪಿ ಬಸವರಾಜಪ್ಪ, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಯುವರಾಜ್ ಕಂಬಳಿ, ಆರೂನ್ ಅಖ್ತರ್, ತಹಸಿಲ್ದಾರ್ ಸಂತೋಷ್ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹೆದ್ದಾರಿ ತಡೆಯಲು ಮುಂದಾದ ರೈತರನ್ನು ಈ ಸಮಯದಲ್ಲಿ ಪೋಲಿಸರು ವಶಕ್ಕೆ ಪಡೆದರು.ಫೋಟೋ
ಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಹರಿಹರ ತಾಲೂಕಿನ ರೈತರು ತಾಲೂಕಿನ ಹನಗವಾಡಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-೪೮ ತಡೆ ನಡೆಸಿ ಪ್ರತಿಭಟನೆ.